ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕ್ರೀಡಾಕೂಟಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ಸಿಕ್ಕಾಗಿದೆ. ಈಗಾಗಲೇ ಭಾರತೀಯ ಕ್ರೀಡಾಪಟುಗಳು ಕೆಲ ವಿಭಾಗದಲ್ಲಿ ಸ್ಪರ್ಧಿಸಿ ಸೋಲು ಮತ್ತು ಗೆಲುವು ಕಂಡಿದ್ದಾರೆ. ಈ ಮಧ್ಯೆ ಕ್ರೀಡಾ ಗ್ರಾಮದಲ್ಲಿ ಆಹಾರದ ಕೊರತೆ ಉಂಟಾಗಿದೆ ಎಂದು ಭಾರತೀಯ ಅಥ್ಲೀಟ್ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿಯೂ ಭಾರತೀಯ ಅಥ್ಲೀಟ್ಗಳು ಸರಿಯಾದ ಪೌಷ್ಟಿಕಾಂಶ ಆಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು.
“ಕ್ರೀಡಾ ಗ್ರಾಮದಲ್ಲಿ ಬೃಹತ್ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ನೂರಾರು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಆದರೆ ತಾವು ಊಟಕ್ಕೆ ತೆರಳಿದಾಗ ಕೆಲವು ಭಾರತೀಯ ಖಾದ್ಯಗಳು ಖಾಲಿಯಾಗಿತ್ತು” ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ತನಿಶಾ ಕ್ರಾಸ್ಟೊ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ Paris Olympics: ಶುಭಾರಂಭದ ನಿರೀಕ್ಷೆಯಲ್ಲಿ ಪುರುಷರ ಹಾಕಿ ತಂಡ; ಕಿವೀಸ್ ಎದುರಾಳಿ
ಕೇವಲ ಆಹಾರ ಸಮಸ್ಯೆ ಮಾತ್ರವಲ್ಲದೇ ತಮಗೆ ಉಳಿದುಕೊಳ್ಳಲು ನೀಡಿರುವ ಕೋಣೆ ಬಹಳ ಇಕ್ಕಟ್ಟಿನಿಂದ ಕೂಡಿದ್ದು ಸರಿಯಾಗಿ ನಿದ್ರಿಸಲು ಕೂಡ ಆಗುತ್ತಿಲ್ಲ ಎಂದು ಬಾಕ್ಸರ್ ಅಮಿತ್ ಪಂಘಲ್ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಆಹಾರ ಕೊರತೆಯಾದ ಕಾರಣ ಹೊರಗಿನಿಂದ ರೋಟಿ ದಾಲ್ ತರಿಸಿಕೊಂಡು ಹಸಿವು ನೀಗಿಸಿದೆವೆ ಎಂದು ಹೇಳಿದ್ದಾರೆ. ಆಹಾರ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಅಥ್ಲೀಟ್ಗಳು ಭಾರತೀಯ ಒಲಿಂಪಿಕ್ಸ್ ಸಮಿತಿಗೆ ಮನವಿ ಮಾಡಿದ್ದಾರೆ.
ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಈ ಬಾರಿ ಎಷ್ಟು ಪದಕ ಗೆಲ್ಲಬಹುದು ಎಂದು ಕಾದು ನೋಡಬೇಕಿದೆ. ಇಂದು ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಬಂದಿದೆ. ಶೂಟಿಂಗ್ನಲ್ಲಿ ಸೋಲು ಎದುರಾದರೆ, ರೋಯಿಂಗ್ನಲ್ಲಿ ಗೆಲುವಿನ ಶುಭಾರಂಭ ಕಂಡಿದೆ.
ಆರ್ಚರಿಯಲ್ಲಿ ಪದಕ ನಿರೀಕ್ಷೆ
ಗುರುವಾರ ನಡೆದಿದ್ದ ಪುರುಷರ ಮತ್ತು ಮಹಿಳೆಯರ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ ಭಾರತ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿತ್ತು. ಮಹಿಳಾ ತಂಡ 4ನೇ ಸ್ಥಾನ ಗಳಿಸಿದರೆ, ಪುರುಷರ ತಂಡ 3ನೇ ಸ್ಥಾನ ಗಳಿಸುವ ಮೂಲಕ ಕ್ವಾರ್ಟರ್ ಫೈನಲ್ ಅರ್ಹತೆ ಗಳಿಸಿತು. ಜತೆಗೆ ಮಿಶ್ರ ತಂಡದಲ್ಲಿ ಭಾರತ 5ನೇ ಸ್ಥಾನ ಪಡೆದು ಮುಂದಿನ ಹಂತಕ್ಕೇರಿದೆ. ಆರ್ಚರಿ ವಿಭಾಗದಲ್ಲಿ ಕನಿಷ್ಠ ಒಂದಾದರು ಪದಕ ನಿರೀಕ್ಷೆ ಮಾಡಲಾಗಿದೆ. ಯಾವುದೇ ಪದಕ ಗೆದ್ದರೂ ಕೂಡ ಇದು ಆರ್ಚರಿಯಲ್ಲಿ ಭಾರತಕ್ಕೆ ಒಲಿಯುವ ಐತಿಹಾಸಿಕ ಪದಕವಾಗಲಿದೆ.