Site icon Vistara News

Paris Olympics: ಇಂದು ಲಕ್ಷ್ಯ ಸೇನ್‌-ಪ್ರಣಯ್ ಮಧ್ಯೆ ಪ್ರೀ ಕ್ವಾರ್ಟರ್​ ಮುಖಾಮುಖಿ; ಭಾರತಕ್ಕೆ ಒಂದು ಪದಕ ನಷ್ಟ

Paris Olympics: Lakshya Sen vs HS Prannoy head-to-head record ahead of Paris Olympics round of 16 face-off

ಪ್ಯಾರಿಸ್​: ಒಲಿಂಪಿಕ್ಸ್ ಕೂಟದ(Paris Olympics) ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ‘ಆಲ್‌ ಇಂಡಿಯನ್‌’ ಹೋರಾಟವೊಂದಕ್ಕೆ ಅಣಿಯಾಗಿದೆ. ಇಂದು(ಗುರುವಾರ) ನಡೆಯುವ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ ಸೇನ್‌(Lakshya Sen) ಮತ್ತು ಎಚ್.ಎಸ್.ಪ್ರಣಯ್(HS Prannoy) ಮುಖಾಮುಖಿಯಾಗಲಿದ್ದಾರೆ. ಉಭಯ ಆಟಗಾರರ ಮುಖಾಮುಖಿಯಾದ ಕಾರಣ ಪುರುಷರ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಒಂದು ಪದಕ ನಿರೀಕ್ಷೆ ಹುಸಿಯಾಗಿದೆ.

ಬುಧವಾರ ತಡರಾತ್ರಿ ನಡೆದಿದ್ದ ಗ್ರೂಪ್​ ‘ಕೆ’ ವಿಭಾಗದ ಅಂತಿಮ ಲೀಗ್​ ಪಂದ್ಯದಲ್ಲಿ ಪ್ರಣಯ್​ ಅವರು ವಿಯೆಟ್ನಾಂನ ಡ್ಯೂಕ್ ಫತ್ ಲೇ ಅವರನ್ನು ಮೂರು ಸೆಟ್​ಗಳ ತೀವ್ರ ಹೋರಾಟದಲ್ಲಿ 16-21, 21-11,21-12 ಅಂತರದಿಂದ ಮಣಿಸಿ 16ರ ಹಂತಕ್ಕೆ ಮುನ್ನಡೆದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಜೋನಾಥನ್ ಕ್ರಿಸ್ಟಿ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು.

ಮುಖಾಮುಖಿ


ಲಕ್ಷ್ಯ ಸೇನ್​ ಮತ್ತು ಎಚ್.ಎಸ್.ಪ್ರಣಯ್ ಅವರು ಇದುವರೆಗೆ ಒಟ್ಟು ಏಳು ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಸೇನ್​ 4 ಪಂದ್ಯ ಗೆದ್ದರೆ, ಪ್ರಣಯ್​ 3 ಪಂದ್ಯ ಗೆದ್ದಿದ್ದಾರೆ. ಕಳೆದ ವರ್ಷ(2023) ಜನವರಿಯಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಉಭಯ ಆಟಗಾರರು ಕೊನೆಯ ಬಾರಿಗೆ ಎದುರಾಗಿದ್ದರು. ಈ ಪಂದ್ಯದಲ್ಲಿ ಲಕ್ಷ್ಯ 21-14, 21-15 ನೇರ ಗೇಮ್​ಗಳ ಅಂತರದಿಂದ ಗೆದ್ದು ಬೀಗಿದ್ದರು.

ಭಾರತದ ತಾರಾ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಕೂಡ ಇಂದು ನಡೆಯುವ ಡಬಲ್ಸ್​ ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮಲೇಷ್ಯಾದ ಆರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಗೆದ್ದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.

ಇದನ್ನೂ ಓದಿ Paris Olympics: ನೇರಳೆ ಟ್ರ್ಯಾಕ್​ನಲ್ಲಿ ಕಮಾಲ್​ ಮಾಡಲು ಸಜ್ಜಾದ ಅಥ್ಲೀಟ್​ಗಳು

ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಗೆಲುವು


ಭಾರತದ ಬಾಕ್ಸರ್‌ ನಿಶಾಂತ್‌ ದೇವ್‌(Nishant Dev) ಅವರು ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ(Paris Olympics Boxing) ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ಪದಕವೊಂದು ಖಾತ್ರಿಯಾಗಲಿದೆ. ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ನಿಶಾಂತ್‌, ಮೊಜಾಂಬಿಕ್‌ನ ಟಿ ಮುಕ್ಸಾಂಗಾ ಮತ್ತು ಮೆಕ್ಸಿಕೊದ ಎಂಎ ವರ್ಡೆ ಅಲ್ವಾರೆಜ್ ನಡುವಣ ವಿಜೇತರನ್ನು ಎದುರಿಸಲಿದೆ.

ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲು ಉಭಯ ಬಾಕ್ಸರ್​ಗಳು ಬಲಿಷ್ಠ ಪಂಚ್​ಗಳ ಮೂಲಕ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಗೂ ನಿಶಾಂತ್​ ದೇವ್​ 7ನೇ ಶ್ರೇಯಾಂಕದ ಆಟಗಾರರನ್ನು ಕೇವಲ 1(3-2) ಅಂಕದ ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು. ಸದ್ಯ ಬಾಕ್ಸಿಂಗ್​ನಲ್ಲಿ ಭಾರತ 2 ಪದಕ ನಿರೀಕ್ಷೆ ಮಾಡಿದೆ. ಇದಕ್ಕೂ ಮುನ್ನ ನಡೆದಿದ್ದ 75 ಕೆ.ಜಿ ಮಹಿಳಾ ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.

Exit mobile version