ಪ್ಯಾರಿಸ್: ಎರಡು ಬಾರಿಯ ವಿಶ್ವ ಚಾಂಪಿಯನ್, ಬಾಕ್ಸರ್ ನಿಖತ್ ಜರೀನ್(Nikhat Zareen) ಅವರು ಪ್ಯಾರಿಸ್ ಒಲಿಂಪಿಕ್ಸ್(Paris Olympics) ಮಹಿಳೆಯರ 50 ಕೆಜಿ ಬಾಕ್ಸಿಂಗ್(Paris Olympics boxing) ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ 50 ಕೆಜಿ ಬಾಕ್ಸಿಂಗ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಖತ್ ಜರೀನ್ ಅವರು ಅಗ್ರ ಶ್ರೇಯಾಂಕದ, ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು( Chinese Wu Yu) ವಿರುದ್ಧ 5-0 ಅಂತರದ ಹೀನಾಯ ಸೋಲು ಕಂಡರು. 32ರ ಘಟ್ಟದ ಪಂದ್ಯದಲ್ಲಿ ಜರೀನ್ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು 5-0 ಅಂತರದಿಂದ ಮಣಿಸಿ ಅಂತಿಮ 16ರ ಸುತ್ತಿಗೇರಿದ್ದರು. ಆದರೆ, ಈ ಸುತ್ತಿನಲ್ಲಿ ಇದೇ ಪ್ರಾಬಲ್ಯ ಮೆರೆಯುವಲ್ಲಿ ವಿಫಲರಾದರು. ಲವ್ಲಿನಾ ಮಾತ್ರ ಇನ್ನು ಭಾರತದ ಮಹಿಳಾ ಬಾಕ್ಸಿಂಗ್ ಪದಕ ಭರವಸೆ ಆಗಿದ್ದಾರೆ.
ಬುಧವಾರ ನಡೆದಿದ್ದ 75 ಕೆ.ಜಿ ಮಹಿಳಾ ವಿಭಾಗದ 16ರ ಸುತ್ತಿನ ಬಾಕ್ಸಿಂಗ್ ಹೋರಾಟದಲ್ಲಿ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್(Lovlina Borgohain) ಅವರು ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಿಶಾಂತ್ ದೇವ್
ಭಾರತದ ಬಾಕ್ಸರ್ ನಿಶಾಂತ್ ದೇವ್(Nishant Dev) ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics Boxing) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ಪದಕವೊಂದು ಖಾತ್ರಿಯಾಗಲಿದೆ. ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ನಿಶಾಂತ್, ಮೊಜಾಂಬಿಕ್‌ನ ಟಿ ಮುಕ್ಸಾಂಗಾ ಮತ್ತು ಮೆಕ್ಸಿಕೊದ ಎಂಎ ವರ್ಡೆ ಅಲ್ವಾರೆಜ್ ನಡುವಣ ವಿಜೇತರನ್ನು ಎದುರಿಸಲಿದೆ.
ಇದನ್ನೂ ಓದಿ Paris Olympics: ಕಂಚಿನ ಪದಕ ಗೆದ್ದ ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್ ಕುಸಾಲೆ
ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲು ಉಭಯ ಬಾಕ್ಸರ್ಗಳು ಬಲಿಷ್ಠ ಪಂಚ್ಗಳ ಮೂಲಕ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಗೂ ನಿಶಾಂತ್ ದೇವ್ 7ನೇ ಶ್ರೇಯಾಂಕದ ಆಟಗಾರರನ್ನು ಕೇವಲ 1(3-2) ಅಂಕದ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಭಾರತ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕ ಸಂಖ್ಯೆ ಮೂರಕ್ಕೇರಿದೆ. ಗುರುವಾರ ನಡೆದ 50 ಮೀ. ರೈಫಲ್ 3 ಪೊಸಿಶನ್ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ವಪ್ನಿಲ್ ಫೈನಲ್ ಪಂದ್ಯದ ಪ್ರೋನ್‌ನಲ್ಲಿ 156.8, ನೀಲಿಂಗ್‌ನಲ್ಲಿ 153.3 ಮತ್ತು ಸ್ಟ್ಯಾಂಡಿಂಗ್‌ನಲ್ಲಿ 195 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ್ಕಕೆ ಕೊರಳೊಡ್ಡಿದರು. 463.6 ಅಂಕ ಗಳಿಸಿದ ಚೀನಾದ ಲಿಯು ಯುಕುನ್ ಚಿನ್ನ ಮತ್ತು ಉಕ್ರೇನ್ನ ಕುಲಿಶ್ ಸೆರ್ಹಿ(461.3) ಬೆಳ್ಳಿ ಪದಕ ಗೆದ್ದರು.