ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗಿದ್ದ ಭಾರತದ ಅಥ್ಲೀಟ್‌ಗಳಿಗೆ ಮನೆಯ ತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್ ಸಂಸ್ಥೆ “ಇಂಡಿಯಾ ಹೌಸ್”(India House) ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿತ್ತು. ಇದೀಗ ಪದಕ ಗೆದ್ದ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆ ನೀತಾ ಅಂಬಾನಿ(Nita Ambani) ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಿದ್ದಾರೆ.
ಜಾವೆಲಿನ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಕಂಚು ಗೆದ್ದ ಅಮಾನ್ ಸೆಹ್ರಾವತ್ ಹಾಗೂ ಹಾಕಿ ತಂಡದ ಕ್ರೀಡಾಪಟುಗಳನ್ನು ಶನಿವಾರ ನೀತಾ ಅಂಬಾನಿ ಸನ್ಮಾನಿಸಿದ್ದರು. ಕ್ರೀಡಾಗ್ರಾಮದಲ್ಲಿರುವ ಇಂಡಿಯಾ ಹೌಸ್‌ನಲ್ಲಿ ನಡೆದ ಈ ಸಂಭ್ರಮಾಚರಣೆ ವೇಳೆ ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಪಿ.ಟಿ.ಉಷಾ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಪಿ.ಆರ್.ಶ್ರೀಜೇಶ್, ಅಭಿಶೇಕ್ ನೈನ್, ಅಮಿತ್ ರೋಹಿದಾಸ್ ಹಾಗೂ ಸಂಜಯ್ ಹಾಕಿ ತಂಡದ ಪರವಾಗಿ ಭಾಗಿಯಾಗಿದ್ದರು. ಪದಕ ಗೆದ್ದ ಎಲ್ಲ ಭಾರತೀಯ ಕೀಡಾಪಟುಗಳನ್ನು ಅಂಬಾನಿ ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಿದ್ದರು.
ಕುಸ್ತಿಯಲ್ಲಿ ಕಂಚು ಗೆದ್ದ ಅಮಾನ್ ಸೆಹ್ರಾವತ್‌ರನ್ನು ಶ್ಲಾಘಿಸಿದ ನೀತಾ, ‘ಚೊಚ್ಚಲ ಪಂದ್ಯದಲ್ಲೇ ಅಮಾನ್ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಅವರು ತೋರಿದ ಈ ಸಾಧನೆ ನಮಗೆಲ್ಲ ಸ್ಫೂರ್ತಿ’ ಎಂದು ಹೇಳಿದರು.
ಇದನ್ನೂ ಓದಿ Mukesh Ambani Mobile: ಮುಕೇಶ್ ಅಂಬಾನಿ, ನೀತಾ ಅಂಬಾನಿ ಯಾವ ಮೊಬೈಲ್ ಬಳಸುತ್ತಾರೆ? ಅವುಗಳ ವೈಶಿಷ್ಟ್ಯ ಏನೇನು?
ಇಂಡಿಯಾ ಹೌಸ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ಗಾಯಕ ಶಾನ್ ತಮ್ಮ ಗಾಯನದ ಮೂಲಕ ಕಳೆ ತುಂಬಿದ್ದರು. ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಇಂಡಿಯಾ ಹೌಸ್ಗೆ ಭೇಟಿ ನೀಡಿದ್ದರು. ಒಟ್ಟಾರೆ ಇಂಡಿಯಾ ಹೌಸ್ನಿಂದ ಭಾರತೀಯ ಕ್ರೀಡಾಪಟುಗಳಿಗೆ ಉತ್ತಮ ಆತಿಥ್ಯ ಲಭಿಸಿದೆ.
ಒಲಿಂಪಿಕ್ಸ್ಗೆ ಇಂದು ತೆರೆ
ಪ್ಯಾರಿಸ್ನಲ್ಲಿ ನಡೆದ 33ನೇ ಆವೃತ್ತಿಯ ಬೇಸಗೆ ಒಲಿಂಪಿಕ್ಸ್ಗೆ ಇಂದು(ಭಾನುವಾರ) ಅಧಿಕೃತವಾಗಿ ತೆರೆ ಬೀಳಲಿದೆ. ಕಳೆದ 17 ದಿನಗಳಿಂದ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಪ್ಯಾರಿಸ್‌ನ ಹೃದಯ ಭಾಗವಾದ “ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದಂತೆ ರಾತ್ರಿ 12.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ. ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್(PR Sreejesh) ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್ ಮನು ಭಾಕರ್(Manu Bhaker) ಭಾರದ ಧ್ವಜಧಾರಿಗಳಾಗಿ( India’s Co-Flag Bearer) ಪಥಸಂಚಲನದಲ್ಲಿ ಸಾಗಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ನಟ ಹಾಗೂ ನಿರ್ಮಾಪಕ ಟಾಮ್ ಕ್ರುಯಿಸ್ ಇದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುವುದರಿಂದ ಹಾಲಿವುಡ್ ತಂಡವೊಂದು ಪಾಲ್ಗೊಳ್ಳುವುದಾಗಿ ವರದಿಯಾಗಿದೆ. ಫ್ರೆಂಚ್ ಮತ್ತು ಅಮೆರಿಕನ್ ಕಲಾವಿದರು ಜಂಟಿಯಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮುಂದಿನ ಒಲಿಂಪಿಕ್ ಆತಿಥ್ಯ ವಹಿಸಿದ ದೇಶಕ್ಕೆ ಒಲಿಂಪಿಕ್ ಧ್ವಜವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ಯಾರಿಸ್ ಹಾಗೂ ಲಾಸ್ ಏಂಜಲೀಸ್ ನಗರಗಳ ಮೇಯರ್‌ಗಳು ಉಪಸ್ಥಿತರಿರುತ್ತಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವನ್ನು ಘೋಷಿಸಲಿದ್ದಾರೆ.