ಮೊನಾಕೊ: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಾಗುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ.
ಟೋಕಿಯೊ ಒಲಿಂಪಿಕ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ. ನೀರಜ್ ಅವರು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದು ಈ ಬಾರಿಯೂ ಅವರು ಚಿನ್ನದ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.
ಈ ಬಾರಿ ಚಿನ್ನ ಗೆದ್ದ ಅಥ್ಲೀಟ್‌ಗಳಿಗೆ ಮಾತ್ರ ನಗುದು ಬಹುಮಾನ ದೊರಕಲಿದೆ. 2028ರಲ್ಲಿ ಲಾಸ್ ಏಂಜಲಿಸ್ನಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿವಿಶ್ವ ಅಥ್ಲೆಟಿಕ್ ಸಂಸ್ಥೆ ಘೋಷಿಸಿದೆ. ಡೈಮಂಡ್ ಲೀಗ್, ಕಾಂಟಿನೆಂಟಲ್ ಕಪ್‌ಗಳಲ್ಲಿ ಪದಕ ಗೆದ್ದಾಗ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ ಒಲಿಂಪಿಕ್ಸ್ ಬಹುಮಾನದಲ್ಲಿ ಈ ಸೌಕರ್ಯ ಇರಲಿಲ್ಲ. ಇದೀಗ ಒಲಿಂಪಿಕ್ಸ್ನಲ್ಲಿಯೂ ಈ ನಿಯಮ ಬಂದಿರುವುದು ಸಂತಸ ತಂದಿದೆ ಎಂದು ಡಬ್ಲ್ಯುಎ ಅಧ್ಯಕ್ಷ ಸೆಬಾಸ್ಟಿಯನ್ ಕೊ ಹೇಳಿದ್ದಾರೆ.
ಭಾರತದಿಂದ ಈ ಬಾರಿ ಅಥ್ಲೆಟಿಕ್ಸ್ನಲ್ಲಿ 29 ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಆರಂಭದಲ್ಲಿ ಅಥ್ಲೀಟ್ಗಳ ಸಂಖ್ಯೆ 30 ಇತ್ತು. ಆದರೆ ವನಿತಾ ಶಾಟ್‌ಪುಟರ್ ಅಭಾ ಖತುವಾ ಗೈರಿನಿಂದ 29ಕ್ಕೆ ಇಳಿಯಿತು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ. 29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.
ಅತ್ಯಧಿಕ 18 ಮಂದಿ ಸಹಾಯಕ ಸಿಬಂದಿಯನ್ನು ಶೂಟಿಂಗ್ ತಂಡಕ್ಕೆ ಒದಗಿಸಲಾಗಿದೆ. ಕುಸ್ತಿಗೆ 12, ಬಾಕ್ಸಿಂಗ್‌ಗೆ 11, ಹಾಕಿಗೆ 10, ಟಿಟಿ ಮತ್ತು ಬ್ಯಾಡ್ಮಿಂಟನ್‌ಗೆ 9, ಗಾಲ್ಫ್ಗೆ 5, ಆರ್ಚರಿ, ಹಾಯಿದೋಣಿ ಮತ್ತು ವೇಟ್‌ಲಿಫ್ಟಿಂಗ್‌ಗೆ
4, ಟೆನಿಸ್‌ಗೆ 3, ಈಜಿಗೆ 2 ಹಾಗೂ ಜೂಡೋಗೆ ಒಬ್ಬರು ಸಹಾಯಕ ಸಿಬ್ಬಂದಿ ನೀಡಲಾಗಿದೆ. ಒಟ್ಟು 140 ಮಂದಿ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 2