ಪ್ಯಾರಿಸ್: ಪ್ಯಾರಿಸ್ನಲ್ಲಿ ನಡೆಯುತ್ತಿರುವ 33ನೇ ಬೇಸಗೆ ಒಲಿಂಪಿಕ್ಸ್(Paris Olympics) ಟೂರ್ನಿಯ ಉದ್ಘಾಟನಾ ಸಮಾರಂಭ ನಿನ್ನೆ(ಶುಕ್ರವಾರ) ಅದ್ಧೂರಿಯಾಗಿ ನಡೆದಿತ್ತು. ಇಂದಿನಿಂದ ಪದಕ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಈ ಮಧ್ಯೆ ಮೊದಲ ಡೋಪಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಂದಿದ್ದ ಇರಾಕ್ ಪುರುಷರ ತಂಡದ ಜೂಡೊಪಟು ಸಜ್ಜದ್ ಸೆಹೆನ್ (Sajjad Sehen) ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಆಟಗಾರ. ಅವರಿಂದ ಪಡೆದ ಮಾದರಿಯಲ್ಲಿ ಎರಡು ಅನಬಾಲಿಕ್ ಸ್ಟಿರಾಯಿಡ್‌ಗಳ ಅಂಶ ಪತ್ತೆಯಾಗಿದೆ ಎಂದು ಅಂತರರಾಷ್ಟ್ರೀಯ ಟೆಸ್ಟಿಂಗ್ ಏಜನ್ಸಿ (ಐಟಿಐ) ತಿಳಿಸಿದೆ. 28 ವರ್ಷದ ಸಜ್ಜದ್ ಸೆಹೆನ್ ಅವರಿಂದ ಕಳೆದ ಮಂಗಳವಾರ ಸ್ಯಾಂಪಲ್ ಪಡೆಯಲಾಗಿತ್ತು.
ರಿಪೋರ್ಟ್ನಲ್ಲಿ ಮೆಟಾಂಡಿನೊನ್ ಮತ್ತು ಬೊಲ್ಡೆನೊನ್ ಅಂಶಗಳು ಕಂಡುಬಂದಿವೆ. ಸದ್ಯ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇದರಿಂದ ಅವರು ಸ್ಪರ್ಧೆ, ತರಬೇತಿ, ಕೋಚಿಂಗ್ ಅಥವಾ ಒಲಿಂಪಿಕ್ಸ್ ಕ್ರೀಡೆಗಳ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಅವರು ಮುಂದಿನ ಮಂಗಳವಾರ ಉಜ್ಬೇಕಿಸ್ತಾನ ಸ್ಪರ್ಧಿಯ ವಿರುದ್ಧ 81 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿಯಬೇಕಿತ್ತು. ಒಂದೊಮ್ಮೆ ಅವರ ಮತ್ತೊಂದು ಪರೀಕ್ಷೆಯಲ್ಲಿಯೂ ಉದ್ದೀಪನ ಮದ್ದು ಸೇವನೆ ಮಾಡಿದ್ದು ದೃಢವಾದರೆ ಅವರ ಒಲಿಂಪಿಕ್ಸ್ ಕನಸು ಭಗ್ನಗೊಳ್ಳಲಿದೆ. ಕಾಲಿ ಕೈಯಲ್ಲಿ ಅವರು ತವರಿಗೆ ಮರಳಬೇಕಾಗುತ್ತದೆ. ಅಲ್ಲದೆ ಕೆಲ ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಬೇಕಾಗಿದೆ.
ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ನಲ್ಲಿ ಇಂದು ಭಾರತದ ಕ್ರೀಡಾ ಸ್ಫರ್ಧೆಗಳು; ಶೂಟಿಂಗ್ನಲ್ಲಿ ಪದಕ ನಿರೀಕ್ಷೆ
ಎಲ್ಲ ಕ್ರೀಡೆಗಳಲ್ಲಿರುವಂತೆ ಒಲಿಂಪಿಕ್ಸ್‌ಗಳಲ್ಲಿಯೂ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು 1968ರ ಮೆಕ್ಸಿಕೊ ಗೇಮ್ಸ್‌ನಲ್ಲಿ. ಬಿಯರ್ ಕುಡಿದಿದ್ದಕ್ಕಾಗಿ ಸ್ವೀಡನ್ ಆ್ಯತ್ಲೀಟ್ ಹನ್ಸ್-ಗುನ್ನಾರ್ ಲಿಲಿಜೆನ್‌ವಾಲ್ ನಿಷೇಧ ಶಿಕ್ಷೆ ಅನುಭವಿಸಬೇಕಾಯಿತು! ಇದಕ್ಕಾಗಿ ಅವರು ಗೆದ್ದಿದ್ದ ಕಂಚಿನ ಪದಕವನ್ನೂ ವಾಪಸ್ ಪಡೆಯಲಾಗಿತ್ತು.
ಒಲಿಂಪಿಕ್ ನಡೆಯುವ ಮುನ್ನವೇ ಕ್ರೀಡಾಪಟುಗಳು ತಮ್ಮ ರಕ್ತ ಹಾಗೂ ಮೂತ್ರವನ್ನು ಪರೀಕ್ಷೆಗೆ ನೀಡಬೇಕಾಗುತ್ತದೆ. ಇದಾದ ಬಳಿಕ ಕೂಟದಲ್ಲಿ ನಿರ್ದಿಷ್ಟ ಆಟ ಅಥವಾ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಪಡೆದವರ ರಕ್ತ ಹಾಗೂ ಮೂತ್ರವನ್ನು ತಕ್ಷಣವೇ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತದೆ. ಸ್ಪರ್ಧೆ ನಡೆಯುವ ಸ್ಥಳಗಳಲ್ಲೇ ಪದೇ ಪದೇ ಇಂಥ ಪರೀಕ್ಷೆಗಳನ್ನು ನಡೆಸಬಹುದಾಗಿದೆ.
ಪ್ರತಿ ಅಥ್ಲೀಟ್‌ನಿಂದ ಎರಡು ‘ಸ್ಯಾಂಪಲ್’ಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲ ‘ಸ್ಯಾಂಪಲ್’ನಲ್ಲಿ ನಿಷೇಧಿತ ಮದ್ದು ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟರೆ, ಅಥ್ಲೀಟ್‌ಗಳು ಎರಡನೇ ಸ್ಯಾಂಪಲ್ ಅನ್ನೂ ಪರೀಕ್ಷಿಸುವಂತೆ ಮನವಿ ಮಾಡಿಕೊಳ್ಳಬಹುದು. ರಕ್ತ ಅಥವಾ ಮೂತ್ರದ ‘ಸ್ಯಾಂಪಲ್’ಗಳನ್ನು (ನಮೂನೆಗಳನ್ನು) ಶೈತ್ಯಾಗಾರದಲ್ಲಿ ಸಂಗ್ರಹಿಸಿಟ್ಟು, ಎಂಟು ಹತ್ತು ವರ್ಷಗಳ ನಂತರ ಕೂಡ ಪರೀಕ್ಷಿಸಬಹುದಾಗಿದೆ.