ಪ್ಯಾರಿಸ್: ಕಳೆದ ಟೋಕಿಯೊ ಒಲಿಂಪಿಕ್ಸ್ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದ ಮೀರಾಬಾಯಿ ಚಾನು(mirabai chanu) ಇಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗಾಯದಿಂದಾಗಿ 6 ತಿಂಗಳ ಕಾಲ ಸ್ಪರ್ಧೆಯಿಂದ ದೂರ ಉಳಿದಿದ್ದ ಕಾರಣ ಅವರ ಫಿಟ್ನೆಸ್ ಹೇಗಿರಲಿದೆ ಎನ್ನುವ ಆತಂಕ ಕೂಡ ಉಂಟು ಮಾಡಿದೆ. ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಹೌ ಝಿಹುಯಿ ಅವರಿಂದ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪಂದ್ಯ ರಾತ್ರಿ 11 ಗಂಟೆಗೆ ನಡೆಯಲಿದೆ.
ಇಂದು ರಾತ್ರಿ ನಡೆಯುವ ಮಹಿಳಾ 49 ಕೆಜಿ ವಿಭಾಗದಲ್ಲಿ ಚಾನು ಸ್ಪರ್ಧೆ ಮಾಡಲಿದ್ದಾರೆ. ಪದಕ ಗೆದ್ದರೆ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ದಾಖಲೆ ನಿರ್ಮಿಸಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಒಟ್ಟು 202 ಕೆಜಿ ಭಾರವನ್ನೆತ್ತಿ (87 ಕೆಜಿ, 115 ಕೆಜಿ) ಬೆಳ್ಳಿ ಪದಕ ಗೆದ್ದಿದ್ದರು. ಗಾಯದಿಂದಾಗಿ ಕಳೆದ ಏಷ್ಯಡ್ನಲ್ಲಿ ಕಣಕ್ಕಿಳಿದಿರಲಿಲ್ಲ. ಚಾನು ಸ್ನ್ಯಾಚ್‌ನಲ್ಲಿ 88 ಕೆಜಿ ದಾಖಲೆ ಹೊಂದಿದ್ದಾರೆ. ಹಾಗೆಯೇ ಜೆರ್ಕ್‌ನಲ್ಲಿ 119 ಕೆಜಿ ಎತ್ತಿರುವುದು ವೈಯಕ್ತಿಕ ದಾಖಲೆಯಾಗಿದೆ.
ಇದನ್ನೂ ಓದಿ Paris Olympics: ಇಂದು ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ
ಗೆಲ್ಲುವ ವಿಶ್ವಾಸ ಇದೆ
ಮೀರಾಬಾಯಿ ಚಾನು ಕಳೆದ ಒಂದು ತಿಂಗಳಿಂದ ಪ್ಯಾರಿಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಭ್ಯಾಸದ ವೇಳೆ ಅವರು ಸಂಪೂರ್ಣ ಫಿಟ್ ಆಗಿ ಕಂಡು ಬಂದಿದ್ದಾರೆ. ಅವರು ಈ ಬಾರಿಯೂ ಭಾರತಕ್ಕೆ ಪದಕ ಗೆಲ್ಲುವ ವಿಶ್ವಾಸ ನನಗಿದೆ ಎಂದು ಕೋಚ್ ವಿಜಯ್ ಶರ್ಮ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಫಿಸಿಕಲ್ ಥೆರಪಿಸ್ಟ್ ಹಾಗೂ ಕಂಡೀಶನಿಂಗ್ ಕೋಚ್ ಆಗಿರುವ ಅಮೆರಿಕದ ಡಾ| ಏರಾನ್ ಹಾರ್ಶಿಗ್ ಕೂಡ ಚಾನು ಉತ್ತಮ ಲಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಚಾನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಏಕೈಕ ವೇಟ್ಲಿಫ್ಟರ್ ಆಗಿದ್ದಾರೆ. ಒಟ್ಟಾರೆಯಾಗಿ ಇದು ಅವರಿಗೆ ಮೂರನೇ ಒಲಿಂಪಿಕ್ಸ್ ಟೂರ್ನಿಯಾಗಿದೆ. ಕಳೆದ ಬಾರಿ ಟೋಕಿಯೊದಲ್ಲಿ ಭಾರತದ ಪದಕ ಖಾತೆಯನ್ನು ತೆರೆದದ್ದು ಚಾನು. ಈ ಬಾರಿ ಚಿನ್ನದ ಪದಕದೊಂದಿಗೆ ಮಿನುಗಲಿ ಎನ್ನುವುದು ಎಲ್ಲ ಭಾರತೀಯರ ಹಾರೈಕೆಯಾಗಿದೆ.
ಮೀರಾಬಾಯಿಗೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಧೃಡಪಡಿಸಿಕೊಳ್ಳಲು ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕಾಗಿತ್ತು. ಹೀಗಾಗಿ ಅವರು ಈ ಕೂಟದಲ್ಲಿ ಕಣಕ್ಕಿಳಿದರು. ಒಟ್ಟು 184 ಕೆಜಿ (81ಕೆಜಿ+103ಕೆಜಿ)ತೂಕ ಎತ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ವೇಳೆ ತೊಡೆಯ ಸ್ನಾಯುಬೇನೆಗೆ ತುತ್ತಾಗಿದ್ದ ಚಾನು ಆ ಬಳಿಕ ಯಾವುದೇ ಪ್ರಮುಖ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.