ಪ್ಯಾರಿಸ್: ಕಳೆದ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ(Paris Olympics) ಭಾರತ 7 ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬಂಗಾರ ಗೆದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಬಾಕ್ಸಿಂಗ್ನಲ್ಲಿ ಲವ್ಲೀನಾ ಬೊರ್ಗೊಹೇನ್ ಕಂಚು, ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ, ಬಜರಂಗ್ ಪೂನಿಯ ಕಂಚು, ಪುರುಷರ ಹಾಕಿಯಲ್ಲಿ ಕಂಚು, ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಕಂಚು ಗೆದಿದ್ದರು. ಈ ಬಾರಿ ಪ್ಯಾರಿಸ್ನಲ್ಲಿ ಪದಕ ಗೆಲ್ಲಬಹುದಾದ ಅಥ್ಲೀಟ್‌ಗಳ ವಿವರ ಇಲ್ಲಿದೆ.
ನೀರಜ್ ಚೋಪ್ರಾ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಮೇಲೆ ಈ ಬಾರಿಯೂ ಪದಕ ನಿರೀಕ್ಷೆ ಮಾಡಲಾಗಿದೆ. ಕಳೆದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ ಟೂರ್ನಿಯಲ್ಲಿಯೂ ಚಿನ್ನ ಗೆದ್ದಿದ್ದ ನೀರಜ್ ಪ್ಯಾರಿಸ್ನಲ್ಲಿಯೂ ಚಿನ್ನ ಗೆಲ್ಲುವ ವಿಶ್ವಾಸ ಭಾರತೀರದ್ದು.
ಅವಿನಾಶ್ ಸಾಬ್ಲೆ
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸ್ಟೀಪಲ್ ಚೇಸ್ ಓಟಗಾರ ಅವಿನಾಶ್ ಸಾಬ್ಲೆ ಅವರು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹೊಸ ಪದಕ ಬರವಸೆಯ ಅಥ್ಲೀಟ್ ಆಗಿ ಗುರುತಿಸಿಕೊಂಡಿದ್ದಾರೆ. ಸೈನಿಕನಾಗಿರುವ ಅವರು 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಪಿ.ವಿ.ಸಿಂಧು
ಕಳೆದೊಂದು ವರ್ಷಗಳಿಂದ ಆಡಿದ ಎಲ್ಲ ಟೂರ್ನಿಯಲ್ಲಿಯೂ ಮುಗ್ಗರಿಸಿ ಫಾರ್ಮ್ ಕಳೆದುಕೊಂಡಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮೇಲೆ ಈ ಬಾರಿಯೂ ಪದಕ ನಿರೀಕ್ಷೆ ಮಾಡಲಾಗಿದೆ. ಒಲಿಂಪಿಕ್ಸ್ ಟೂರ್ನಿಯಲ್ಲಿ ಸಿಂಧು ಅವರದ್ದೂ ಡಿಫರೆಂಟ್ ಗೇಮ್. ಹೀಗಾಗಿ ಪದಕ ನಿರೀಕ್ಷೆ ಇಡಲಾಗಿದೆ. 2016, 2021ರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದರು.
ಸಾತ್ವಿಕ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ
ಈಗಾಗಲೇ ಹಲವು ಟೂರ್ನಿಯಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಪದಕ ಗೆದ್ದು ಕೊಟ್ಟಿರುವ ಸ್ಟಾರ್ ಬ್ಯಾಡ್ಮಿಂಡನ್ ಜೋಡಿ ಸಾತ್ವಿಕ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಕೂಡ ಪದಕ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿದೆ. ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಈ ಜೋಡಿ ಚಿನ್ನ ಗೆದ್ದ ಸಾಧನೆ ಮಾಡಿತ್ತು.
ಮನು ಬಾಕರ್
10 ಮೀ. ಏರ್ ಪಿಸ್ತೂಲ್‌ನಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮಹಿಳಾ ಶೂಟರ್ ಮನು ಬಾಕರ್ ಕೂಡ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ Paris Olympics 2024: ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ
ಲವ್ಲಿನಾ ಬೊರ್ಗೊಹೇನ್
ಟೋಕಿಯೋ ಒಲಿಂಪಿಕ್ಸ್ ಟೂರ್ನಿಯಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ಅವರು ಕಣಕ್ಕಿಳಿಯುತ್ತಿದ್ದಾರೆ.
ಅದಿತಿ ಅಶೋಕ್
ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್ ಕೂಡ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಕಳೆದ ಟೋಕಿಯೋದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ಅದಿತಿ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತ ಪುರುಷರ ಹಾಕಿ ತಂಡ
ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಪದಕ ಗೆದ್ದ ಸಾಧನೆ ತೋರಿದ್ದ ಭಾರತೀಯ ಪುರುಷರ ಹಾಕಿ ತಂಡ ಈ ಬಾರಿಯೂ ಪದಕ ಗೆಲ್ಲುವು ವಿಶ್ವಾಸದಲ್ಲಿದೆ. ಹಿರಿಯ ಮತ್ತು ಕಿರಿಯ ಆಟಗಾರನ್ನು ಒಳಗೊಂಡಿರುವ ತಂಡ ಸಾಕಷ್ಟು ಸಮತೋಲಿತವಾಗಿದೆ.
ಮೀರಾಬಾಯಿ ಚಾನು
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಖಾತೆ ತೆರೆದಿದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದೊಂದು ವರ್ಷದಿಂದ ಅವರು ಗಾಯದ ಸಮಸ್ಯೆಯಿಂದ ಬಳಲಿದ್ದರೂ ಕೂಡ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.
ನಿಖತ್ ಜರೀನ್
2 ಬಾರಿ ವಿಶ್ವ ಚಾಂಪಿಯನ್ ಯುವ ಬಾಕ್ಸರ್ ನಿಖತ್ ಜರೀನ್ ಮೇಲೆ ಪದಕ ಗೆಲ್ಲುವ ಭಾರೀ ನಿರೀಕ್ಷೆ ಇರಿಸಲಾಗಿದೆ.