ಪ್ಯಾರಿಸ್: ಕುಸ್ತಿ ವಿಭಾಗದಲ್ಲಿ ಬುಧವಾರ ಐತಿಹಾಸಿಕ ಪದಕ ನಿರೀಕ್ಷೆಯಲ್ಲಿದ್ದ ಭಾರತೀಯರ ನಿರೀಕ್ಷೆಯೊಂದು ಹುಸಿಯಾಗಿದೆ. 50 ಕೆಜಿ ಮಹಿಳಾ ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಬುಧವಾರ ರಾತ್ರಿ ಕಣಕ್ಕಿಳಿಯಬೇಕಿದ್ದ ವಿನೇಶ್ ಫೋಗಟ್ ಅವರ ತೂಕ ವಿಭಾಗದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಅವರನ್ನು ಈ ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಹೀಗಾಗಿ ಭಾರತ ಪದಕಕೊಂದನ್ನು ಕಳೆದುಕೊಂಡಿತು. ಇದೀಗ ನಾಳೆ(ಗುರುವಾರ) ನಡೆಯುವ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಸ್ಪರ್ಧೆಯಲ್ಲಿ ಭಾರತ ಒಟ್ಟು ಮೂರು ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದೆ. ವೇಳಾಪಟ್ಟಿ ಹೀಗಿದೆ.
ಐತಿಹಾಸಿಕ ಪದಕ ನಿರೀಕ್ಷೆಯಲ್ಲಿ ಸಾಬ್ಳೆ
ಒಲಿಂಪಿಕ್ಸ್ ಇತಿಹಾಸದಲ್ಲಿ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯನೆಂಬ ದಾಖಲೆ ಬರೆದಿರುವ ಅಥ್ಲೀಟ್ ಅವಿನಾಶ್ ಮುಕುಂದ್ ಸಾಬ್ಲೆ(Avinash Sable) ಗುರುವಾರ ರಾತ್ರಿ 1.13 ಗಂಟೆಗೆ ನಡೆಯುವ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಪದಕ ಗೆಲ್ಲುವ ಇರಾದೆಯೊಂದಿಗೆ ಓಟ ಆರಂಭಿಸಲಿದ್ದಾರೆ. ಸೋಮವಾರ ನಡೆದಿದ್ದ 2ನೇ ವಿಭಾಗದ ಹೀಟ್‌ನಲ್ಲಿ ಸಾಬ್ಲೆ 8:15.43 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿ 5ನೇ ಸ್ಥಾನಿಯಾಗಿದ್ದರು. ಕಳೆದ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಅವರು 8.09.91 ನಿಮಿಷಗಳ ಸಾಧನೆಗೈದಿದ್ದರು.
ಚಿನ್ನದ ನಿರೀಕ್ಷೆಯಲ್ಲಿ ನೀರಜ್
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ, ಭಾರತ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್ ಎಸೆದು ನೇರವಾಗಿ ಫೈನಲ್ ಪ್ರವೇಶಿಸಿದ್ದರು. ನೀರಜ್ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
ಕಂಚಿನ ಪದಕಕ್ಕೆ ಹಾಕಿ ತಂಡ ಹೋರಾಟ
ಮಂಗಳವಾರ ನಡೆದಿದ್ದ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲುವ ಮೂಲಕ 44 ವರ್ಷಗಳ ಬಳಿಕ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡ ಭಾರತ ತಂಡ ನಾಳೆ(ಗುರುವಾರ) ನಡೆಯುವ ಕಂಚಿನ ಪದಕದ ಹೋರಾಟದಲ್ಲಿ ಸ್ಪೇನ್ ವಿರುದ್ಧ ಆಡಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದ ಭಾರತ ಈ ಬಾರಿಯೂ ಕಂಚಿನ ನಿರೀಕ್ಷೆಯಲ್ಲಿದೆ.
ವೇಳಾಪಟ್ಟಿ ಹೀಗಿದೆ
3,000 ಮೀ. ಸ್ಟೀಪಲ್‌ಚೇಸ್ ಫೈನಲ್: ಅವಿನಾಶ್ ಸಾಬ್ಲೆ. (ಆರಂಭ; ರಾತ್ರಿ 1.13)
ಗಾಲ್ಫ್
ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2; ಅದಿತಿ ಅಶೋಕ್, ದಿಶಾ ದಾಗರ್. (ಆರಂಭ: ಮಧ್ಯಾಹ್ನ 12.30)
ಹಾಕಿ
ಪುರುಷರ ಕಂಚಿನ ಸ್ಪರ್ಧೆ; ಭಾರತ vs ಸ್ಟೇನ್. (ಆರಂಭ; ಸಂಜೆ 5.30)
ಜಾವೆಲಿನ್ ಫೈನಲ್
ನೀರಜ್ ಚೋಪ್ರಾ. ಆರಂಭ(ರಾತ್ರಿ 11.55)