ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ (Ricky Ponting) ಅವರನ್ನು ಬಿಟ್ಟಾಗ ಫ್ರಾಂಚೈಸಿಯ ಅಭಿಮಾನಿಗಳಿಗೆ ಮತ್ತು ಆಟಗಾರರಿಗೆ ಆಘಾತವನ್ನುಂಟು ಮಾಡಿತ್ತು. ಆದರೆ ಫ್ರಾಂಚೈಸಿಯ ಸಹ ಮಾಲೀಕ ಮತ್ತು ಅಧ್ಯಕ್ಷ ಪಾರ್ಥ್ ಜಿಂದಾಲ್ ಅಂತಿಮವಾಗಿ ಪಾಂಟಿಂಗ್ ಅವರನ್ನು ಆ ಹುದ್ದೆಯಿಂದ ತೆಗೆದುಹಾಕುವ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ರಿಕಿ ಪಾಂಟಿಂಗ್ ಅವರಿಂದ ಬೇರ್ಪಡುವುದಾಗಿ ಘೋಷಿಸಿತು. ಪಾಂಟಿಂಗ್ ಏಳು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರ ಅಧಿಕಾರಾವಧಿಯಲ್ಲಿ ತಂಡವು ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ವಿಫಲವಾಯಿತು. ಇಷ್ಟು ದೀರ್ಘಾವಧಿಯಲ್ಲಿ ಒಂದೇ ಒಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿಯನ್ನು ಗೆಲ್ಲಲು ತಂಡದ ಅಸಮರ್ಥತೆಯಿಂದಾಗಿ ಪಾಂಟಿಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಈ ಹಿಂದೆ ಭಾವಿಸಲಾಗಿತ್ತು. ಆದರೆ ಪಾರ್ಥ್ ಜಿಂದಾಲ್ ಅಂತಹ ದೊಡ್ಡ ನಿರ್ಧಾರದ ಹಿಂದಿನ ನಿಜವಾದ ಕಾರಣ ಬಹಿರಂಗಪಡಿಸಿದ್ದಾರೆ.
ಪಾರ್ಥ್ ಜಿಂದಾಲ್ ಏನಂದರು?
ಪಾರ್ಥ್ ಜಿಂದಾಲ್ ಅವರು 2026 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ತಂಡಕ್ಕೆ ಪ್ರಾಯೋಜಕರಾಗಿರುವ ಪ್ರಸಿದ್ಧ ಜೆಎಸ್ಡಬ್ಲ್ಯೂ ಗ್ರೂಪ್ನ ಮುಖ್ಯಸ್ಥರಾಗಿದ್ದಾರೆ. ಒಲಿಂಪಿಕ್ಸ್ ಮುನ್ನಾದಿನದಂದು ಸಿಎನ್ಬಿಸಿ-ಟಿವಿ 18 ಜೊತೆಗಿನ ಇತ್ತೀಚಿನ ಚರ್ಚೆಯಲ್ಲಿ ಮಾತನಾಡಿ, ರಿಕಿ ಪಾಂಟಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿದ್ದಾರೆ.
ರಿಷಭ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಮುಖೇಶ್ ಕುಮಾರ್ ಅವರಂತಹ ಭಾರತೀಯ ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿರುವ ತಮ್ಮ ತಂಡದ ಪ್ರಮುಖ ಗುಂಪಿನಲ್ಲಿ ಯುವ ಸಹ ಮಾಲೀಕ ವಿಶ್ವಾಸವನ್ನು ತೋರಿಸಿದರು.
“ಮೆಗಾ ಹರಾಜಿನ ಉಳಿಸುವ ಮತ್ತು ಬಿಡುಗಡೆ ನಿಯಮಗಳ ಬಗ್ಗೆ ನಾವು ಬಿಸಿಸಿಐಗೆ ನಮ್ಮ ಅಭಿಪ್ರಾಯಗಳನ್ನು ನೀಡುತ್ತೇವೆ. ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ನಾವು ಉತ್ತಮ ಆಟಗಾರರನ್ನು ಹೊಂದಿದ್ದೇವೆ. ರಿಷಭ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್ ಅವರಂತಹ ಆಟಗಾರರನ್ನು ನೋಡಿದ್ದೇವೆ ಎಂದು ಜಿಂದಾಲ್ ಹೇಳಿದ್ದಾರೆ.
ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಕೇಳಿದಾಗ, ಜಿಂದಾಲ್, ಅವರು ಸದಾ ಭಾರತದಲ್ಲಿ ಲಭ್ಯ ಇರಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದ ಹೇಳಿದ್ದಾರೆ.
ಇದನ್ನೂ ಓದಿ: ICC Champions Trophy : ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!
ಕೋಚ್ ಸಂಪೂರ್ಣ ಸಮಯ ಮೀಸಲಿಡಬೇಕು. ಅವರು ಭಾರತದ ಯಾವುದೇ ನಗರದಲ್ಲಿ ಯಾವುದೇ ಸಮಯದಲ್ಲಿ ಲಭ್ಯವಿರಬೇಕು. ನಾವು ಈ ಬದಲಾವಣೆಯನ್ನು ಮಾಡಲು ಇದೊಂದೇ ಕಾರಣ ಎಂದು ಜಿಂದಾಲ್ ಹೇಳಿದ್ದಾರೆ. ಇದೇ ವೇಳೆ ಈ ಏಳು ವರ್ಷಗಳಲ್ಲಿ ರಿಕಿ ಪಾಂಟಿಂಗ್ ಅವರ ಅಮೂಲ್ಯ ಸೇವೆಗಳಿಗಾಗಿ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.
ರಿಕಿ ಪಾಂಟಿಂಗ್ ಕೋಚ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2020ರಲ್ಲಿ ಫೈನಲ್ ತಲುಪಿತ್ತು. ದುರದೃಷ್ಟವಶಾತ್, ಫೈನಲ್ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.