ಚೆನ್ನೈ: ಆಸ್ಟ್ರೇಲಿಯಾ ತಂಡಕ್ಕೆ ಚೆನ್ನೈನಲ್ಲಿ ಭಾರತದ ಸ್ಪಿನ್ ಬೌಲರ್ಗಳು ಬೆದರಿಕೆ ಒಡ್ಡಲಿದ್ದಾರೆ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಆದರೆ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇದಕ್ಕೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ವಿಶ್ವಕಪ್ನ (ICC World Cup 2023) ಆರಂಭಿಕ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ಗಳನ್ನು ಎದುರಿಸಲು ತಮ್ಮ ತಂಡವು ವಿಭಿನ್ನ “ಯೋಜನೆಯನ್ನು” ಹೊಂದಿದೆ ಎಂದು ಕಮಿನ್ಸ್ ಗುರುವಾರ ಪ್ರತಿಪಾದಿಸಿದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಎಡಗೈ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಚೆನ್ನೈನ ರಣಬಿಸಿಲಿನ ನಡುವೆ ಆಸೀಸ್ ಆಟಗಾರರು ಎದುರಿಸಬೇಕಾಗಿದೆ.
ರಾಜ್ಕೋಟ್ನಲ್ಲಿ ಕಳೆದ ಭಾನುವಾರ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದ ಗೆಲುವು ಆಸೀಸ್ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಮೂರು ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದರೆ, ರಾಜ್ಕೋಟ್ನಲ್ಇ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 352 ರನ್ಗಳ ಬೃಹತ್ ಮೊತ್ತ ಪೇರಿಸುವ ಮೂಲಕ 66 ರನ್ಗಳ ವಿಜಯ ಸಾಧಿಸಿತ್ತು.
ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಕೆಲವು ದಿನಗಳ ತರಬೇತಿ ಮಾಡಿದ್ದೇವೆ. ಆಸ್ಟ್ರೇಲಿಯಾದ ಆಟಗಾರರು ಈಗ ಸಾಕಷ್ಟು ಸ್ಪಿನ್ ಆಡುತ್ತಾರೆ. ನಮ್ಮ ಬ್ಯಾಟರ್ಗಳು ಭಾರತದಲ್ಲಿ ಸಾಕಷ್ಟು ಆಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದ್ದರಿಂದ ಅವರಿಗೆ ಹೆಚ್ಚಿನ (ಭಾರತೀಯ) ಬೌಲರ್ಗಳು ತಿಳಿದಿದ್ದಾರೆ ಮತ್ತು ಅವರು ಅದಕ್ಕೆ ಪೂರಕ ಯೋಜನೆಯನ್ನು ಹೊಂದಿದ್ದಾರೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ನಾವು ನಿಜವಾಗಿಯೂ ಉತ್ತಮ ವಿಶ್ವಾಸ ಹೊಂದಿದ್ದೇವೆ. ರಾಜ್ಕೋಟ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನಾವು ಉತ್ತಮ ಗೆಲುವು ಸಾಧಿಸಿದ್ದೇವೆ. ಭಾರತದಲ್ಲಿ ಏಕದಿನ ಪಂದ್ಯಗಳಲ್ಲಿ ನಾವು ಉತ್ತಮ ದಾಖಲೆಗಳನ್ನು ಹೊಂದಿದ್ದೇವೆ ಎಂದು ನಾಯಕ ಕಮಿನ್ಸ್ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದರು. ಆಕ್ರಮಣಕಾರಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ತಂಡವನ್ನು ಗೆಲ್ಲಿಸಲಿದ್ದಾರೆ ಎಂಬುದಾಗಿ ಹೇಳಿದರು.
ಫಾರ್ಮ್ ಕಂಡುಕೊಂಡ ವಾರ್ನರ್
36 ವರ್ಷದ ವಾರ್ನರ್ ಕಳೆದ ಎರಡು ವರ್ಷಗಳಿಂದ ಫಾರ್ಮ್ಗಾಗಿ ಹೆಣಗಾಡುತ್ತಿದ್ದರೂ, ಅವರು ಈ ವರ್ಷ ಒಂಬತ್ತು ಇನ್ನಿಂಗ್ಸ್ಗಳಲ್ಲಿ 43.33 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ. ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕ ಸೇರಿದಂತೆ 119.26 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲಿ, ವಾರ್ನರ್ ಸತತ ಮೂರು ಅರ್ಧಶತಕಗಳನ್ನು ಗಳಿಸುವ ಮೂಲಕ ಅದ್ಭುತ ಫಾರ್ಮ್ ಕಂಡುಕೊಂಡಿದ್ದಾರೆ.
ಇದನ್ನೂ ಓದಿ : Asia Games : ಪುಟಾಣಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಭಾರತ ಕ್ರಿಕೆಟ್ ತಂಡ
ಒಂಬತ್ತು ಸುತ್ತಿನ ಪಂದ್ಯಗಳಿವೆ. ಆದ್ದರಿಂದ ನಾವು ಪ್ರತಿಬಾರಿಯೂ ಸ್ಪರ್ಧಾತ್ಮ ಕ ಕ್ರಿಕೆಟ್ ಆಡಬೇಕಾಗಿದೆ. “ನಮ್ಮ ತರಬೇತಿ ಅವಧಿಗಳು ದೀರ್ಘವಾಗಿದೆ. ನಮಗೆ ವಿಶ್ರಾಂತಿ ಸಿಗುತ್ತದೆ. ಅದು ಚೇತರಿಸಿಕೊಳ್ಳಲು ಮತ್ತು ಮುಂಬರುವ ಪಂದ್ಯಗಳಿಗೆ ಉತ್ತಮವಾಗಿ ತಯಾರಿ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಕಮಿನ್ಸ್ ವಿಶ್ವಾಸ ವ್ಯಕ್ತಪಡಿಸಿದರು.
ಕಮಿನ್ಸ್ ಅವರ ನೆಚ್ಚಿನ ಟೂರ್ನಿ ಬಗ್ಗೆ ಕೇಳಿದಾಗ, ಟೆಸ್ಟ್ ಚಾಂಪಿಯನ್ಶಿಪ್ ಎಂದು ನಾನು ಹೇಳಬಲ್ಲೆ. ಏಕೆಂದರೆ ನಾವು ಅದನ್ನು ಗೆದ್ದಿದ್ದೇವೆ ಎಂದರು . ಆದರೆ, ಏಕ ದಿನ ವಿಶ್ವ ಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಅತ್ಯಂತ ದೀರ್ಘವಾದ ಮತ್ತು ಸುಮಾರು 50 ವರ್ಷಗಳ ಇತಿಹಾಸವನ್ನು ಹೊಂದಿದೆ. ಏಕದಿನ ವಿಶ್ವಕಪ್ ಬಂದಾಗಲೆಲ್ಲಾ, ಅದು ಸ್ವಲ್ಪ ಹೆಚ್ಚು ವಿಶೇಷವೆಂದು ಭಾವಿಸುತ್ತೇನೆ. ಆತಿಥೇಯ ಭಾರತವು ಪ್ರಬಲವಾಗಿ ಎಂದು ಅವರು ಹೇಳಿದರು.