ಅಹಮದಾಬಾದ್: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಾಯಿ ಮರಿಯಾ ಕಮಿನ್ಸ್ ನಿಧನ ಹೊಂದಿದ್ದಾರೆ. ಈ ಶೋಕದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ (INDvsAUS) ಕಣಕ್ಕೆ ಇಳಿದರು. ಭಾರತಕ್ಕೆ ಆಸ್ಟ್ರೇಲಿಯಾ ತಂಡ ಪ್ರವಾಸಕ್ಕೆ ಬಂದಾಗ ಪ್ಯಾಟ್ ಕಮಿನ್ಸ್ ನೇತೃತ್ವ ವಹಿಸಿದ್ದರು. ಆದರೆ, ತಾಯಿಯ ಅನಾರೋಗ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಕಮಿನ್ಸ್ ಎರಡು ಪಂದ್ಯಗಳು ಮುಕ್ತಾಯಗೊಂಡ ಬಳಿಕ ತವರಿಗೆ ತೆರಳಿದ್ದು. ಇದೀಗ ಅವರ ತಾಯಿಯ ನಿಧನ ಸುದ್ದಿ ಬಂದಿದೆ.
ಪ್ಯಾಟ್ ಕಮಿನ್ಸ್ ಅವರ ತಾಯಿಗೆ 2005ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಅಲ್ಲಿಂದ ಅವರು ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಪ್ಯಾಟ್ ಕಮಿನ್ಸ್ ಭಾರತಕ್ಕೆ ಬಂದ ಬಳಿಕ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಉಂಟಾಗಿತ್ತು. ಹೀಗಾಗಿ ಅರ್ಧದಿಂದಲೇ ಕಮಿನ್ಸ್ ವಾಪಸ್ ತೆರೆಳಿದ್ದರು.
ಇದನ್ನೂ ಓದಿ : IND VS AUS: ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಪ್ಯಾಟ್ ಕಮಿನ್ಸ್; ಸ್ಟೀವನ್ ಸ್ಮಿತ್ಗೆ ನಾಯಕತ್ವ
ಮರಿಯಾ ಕಮಿನ್ಸ್ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಮರಿಯಾ ಅವರ ನಿಧನ ನಮಗೆಲ್ಲರಿಗೂ ಶೋಕದ ವಿಚಾರ. ಪ್ಯಾಟ್ ಕಮಿನ್ಸ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ ವ್ಯಕ್ತಪಡಿಸುತ್ತಿದೆ. ಶೋಕಾಚರಣೆಗಾಗಿ ಆಸ್ಟ್ರೇಲಿಯಾ ತಂಡ ಕಪ್ಪು ಪಟ್ಟಿ ಧರಿಸಿಕೊಂಡು ಕಣಕ್ಕೆ ಇಳಿಯಲಿದೆ ಎಂದು ಬರೆದುಕೊಂಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಮಾಡಿದ ಟ್ವೀಟ್ ಇಲ್ಲಿದೆ
ಮರಿಯಾ ಕಮಿನ್ಸ್ ನಿಧನಕ್ಕೆ ಬಿಸಿಸಿಐ ಕೂಡ ಸಂತಾಪ ಸೂಚಿಸಿದೆ. ಪ್ಯಾಟ್ ಕಮಿನ್ಸ್ ತಾಯಿಯ ನಿಧನದಿಂದ ನಾವು ದುಃಖಿತರಾಗಿದ್ದೇವೆ. ಕಮಿನ್ಸ್ ಅವರಿಗೆ ತಮ್ಮ ತಾಯಿಯ ನಿಧನದ ಬೇಸರ ನಿವಾರಣೆ ಮಾಡುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.