ಬೆಂಗಳೂರು: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು 31-31 ಅಂತರದಲ್ಲಿ ಸಮಬಲ ಸಾಧಿಸಿದವು. ಪಾಟ್ನಾ ಪೈರೇಟ್ಸ್ ತಂಡ ಕೊನೆಯವರೆಗೂ ಗೆಲ್ಲುವ ಅವಕಾಶ ಹೊಂದಿತ್ತು, ಆದರೆ ಕೊನೆಯ ಕ್ಷಣದಲ್ಲಿ ಮಾಡಿದ ಪ್ರಮಾದ ಫಲವಾಗಿ ಗೆಲ್ಲುವ ಪಂದ್ಯದಲ್ಲಿ ಅಂಕ ಹಂಚಿಕೊಂಡಿತು.
ಬೆಂಗಳೂರು ಬುಲ್ಸ್ ಯು ಮುಂಬಾ ವಿರುದ್ಧದ ಪಂದ್ಯದಂತೆಯೇ ದ್ವಿತಿಯಾರ್ಧದಲ್ಲಿ ಪುಟಿದೆದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಭರತ್ 11 ಅಂಕಗಳನ್ನು ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಇತ್ತಂಡಗಳಿಗೂ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇದು ಕೊನೆಯ ಪಂದ್ಯವಾಗಿತ್ತು.
ಪಾಟ್ನಾ ಪೈರೇಟ್ಸ್ ಮುನ್ನಡೆ
ಹಿಂದಿನ ಪಂದ್ಯದಲ್ಲಿ ಜಯದ ಖಾತೆ ತೆರೆದು ಆತ್ಮವಿಶ್ವಾಸವನ್ನು ಇಮ್ಮಡಿ ಮಾಡಿಕೊಂಡಿದ್ದ ಪಾಟ್ನಾ ಪೈರೇಟ್ಸ್ ತಂಡ ಬೆಂಗಳೂರು ಬುಲ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 19-10 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಉತ್ತಮ ರೈಡಿಂಗ್ ಮತ್ತು ಟ್ಯಾಕಲ್ ಪ್ರದರ್ಶನ ನೀಡಿದ ಪಾಟ್ನಾ ತಂಡ ಪಂದ್ಯ ಆರಂಭಗೊಂಡ 9 ನಿಮಿಷದಲ್ಲಿಯೇ ಬೆಂಗಳೂರು ತಂಡವನ್ನು ಆಲೌಟ್ ಮಾಡಿ ಪ್ರಭುತ್ವ ಸಾಧಿಸಿತು.
ರೈಡಿಂಗ್‌ನಲ್ಲಿ ರೋಹಿತ್ ಗುಲಿಯಾ (4) ಮತ್ತು ಸಚಿನ್ (6) ಉತ್ತಮ ಪ್ರದರ್ಶನ ತೋರಿ ಪ್ರತಿಯೊಂದು ಹಂತದಲ್ಲೂ ತಂಡದ ಮುನ್ನಡೆಗೆ ನೆರವಾದರು. ನಾಯಕ ಮಹೆಂದರ್ ಸಿಂಗ್ ಟ್ಯಾಕಲ್‌ನಲ್ಲಿ ಹಾಗೂ ಭರತ್ ರೈಡಿಂಗ್‌ನಲ್ಲಿ ತಲಾ 3 ಅಂಕ ಗಳಿಸುವ ಮೂಲಕ ಬೆಂಗಳೂರು ಬುಲ್ಸ್ ಸಮರ್ಥ ಹೋರಾಟ ನೀಡಿತು. ಹಿಂದಿನ ಪಂದ್ಯದಲ್ಲಿ ಇದೇ ರೀತಿ ಹಿನ್ನಡೆ ಕಂಡಿದ್ದ ಬೆಂಗಳೂರು ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿ ಪಂದ್ಯ ಗೆದ್ದುಕೊಂಡಿತ್ತು. ಪಾಟ್ನಾ ಪೈರೇಟ್ಸ್ ಪರ ನೀರಜ್ ಕುಮಾರ್ ಹಾಗೂ ಮನೀಶ್ ಟ್ಯಾಕಲ್‌ನಲ್ಲಿ ತಲಾ 2 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಇದನ್ನೂ ಓದಿ | Pro Kabaddi | ಭರತ್ ಭರ್ಜರಿ ಆಟ; ಯು ಮುಂಬಾಗೆ ಸೋಲುಣಿಸಿದ ಬೆಂಗಳೂರು ಬುಲ್ಸ್