ಬೆಂಗಳೂರು: ಬೆಂಗಳೂರು ಬುಲ್ಸ್ ತಂಡದ ಮಾಜಿ ತಾರಾ ಕಬಡ್ಡಿ ಪಟು ಪವನ್ ಸೆಹ್ರಾವತ್ ಮತ್ತೆ ಕಬಡ್ಡಿ ಕೋರ್ಟ್ಗೆ ಮರಳಲಿದ್ದಾರೆ. ಆದರೆ ಈ ಬಾರಿ ಅವರು ಆಟಗಾರನ ಬದಲಾಗಿ ವೀಕ್ಷಕ ವಿವರಣೆಗಾರರಾಗಿ ಕಬಡ್ಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಕೂಟದ ಆರಂಭಿಕ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಪವನ್ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಿಂದ ಹೊರಬಿದ್ದಿದ್ದರು.
ಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ ಕಾಣುತ್ತಿರುವ ತಮಿಳ್ ತಲೈವಾಸ್ ತಂಡದ ನಾಯಕ ಪವನ್ ಸೆಹ್ರಾವತ್ ಇದೀಗ 9ನೇ ಆವೃತ್ತಿಯ ಪ್ರೊ ಕಬಡ್ಡಿ ಕೂಟದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ವೀಕ್ಷಕ ವಿವರಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ದುಬಾರಿ ಆಟಗಾರ
9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪವನ್ ಅವರನ್ನು ತಮಿಳ್ ತಲೈವಾಸ್ ಫ್ರಾಂಚೈಸಿಯು ಬರೋಬ್ಬರಿ 2.23 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಮೂಲಕ ಪವನ್ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಗುಜರಾತ್ ಜೈಂಟ್ಸ್ ಎದುರಿನ ಮೊದಲ ಪಂದ್ಯದಲ್ಲಿಯೇ ಎದುರಾಳಿ ತಂಡದ ಚಂದ್ರನ್ ರಂಜಿತ್ ಅವರನ್ನು ಟ್ಯಾಕಲ್ ಮಾಡುವ ಬರದಲ್ಲಿ ಗಾಯಕ್ಕೆ ತುತ್ತಾಗಿ ಕೂಟದಿಂದ ಹೊರಬಿದ್ದಿದ್ದರು. ಸದ್ಯ ಅವರು ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆಯಿಂದ ಚೇತರಿಕೆ ಕಾಣುತ್ತಿದ್ದಾರೆ.
ಇದನ್ನೂ ಓದಿ | Pro Kabaddi | ರೋಚಕ ಪಂದ್ಯದಲ್ಲಿ ಬುಲ್ಸ್ ವಿರುದ್ಧ ಮೇಲುಗೈ ಸಾಧಿಸಿದ ಗುಜರಾತ್ ಜೈಂಟ್ಸ್