ಧರ್ಮಶಾಲಾ: ಆರಂಭಿಕ ಹಂತದಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿ, ಟೂರ್ನಿ ಮುಕ್ತಾಯದ ಹಂತದಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆರ್ಸಿಬಿ ತಂಡ ನಾಳೆ ನಡೆಯುವ ಐಪಿಎಲ್(IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(RCB vs PBKS) ವಿರುದ್ಧ ಕಣಕ್ಕಿಳಿಯಲಿದೆ. ಪ್ಲೇ ಆಫ್ಗೆ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಪಂದ್ಯ ಅತ್ಯಂತ ರೋಚಕವಾಗಿ ಸಾಗುವ ಸಾಧ್ಯತೆ ಇದೆ. ಸೋತ ತಂಡದ ಪ್ಲೇ ಆಫ್ ಹಾದಿ ಬಂದ್ ಆಗಲಿದೆ.
ಎರಡೂ ತಂಡಗಳು 11 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದ್ದರೂ, ಆರ್ಸಿಬಿ ಉತ್ತಮ ರನ್ ರೇಟ್ ಆಧಾರದಲ್ಲಿ 7ನೇ ಸ್ಥಾನದಲ್ಲಿದೆ ಪಂಜಾಬ್ 8ನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ಈ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶ ಇದೆ. ಜತೆಗೆ ಇತರ ತಂಡಗಳ ಫಲಿತಾಂಶಗಳು ಕೂಡ ಮುಖ್ಯವಾಗಿದೆ. ಒಟ್ಟಾರೆ ನಾಳೆ ಗೆದ್ದ ತಂಡ ಪ್ಲೇ ಆಪ್ ರೇಸ್ನಲ್ಲಿ ಉಳಿಯಲಿದೆ.
ಪಿಚ್ ರಿಪೋರ್ಟ್
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್ ಓವಲ್, ನ್ಯೂಜಿಲ್ಯಾಂಡ್ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ರಾತ್ರಿ ಪಂದ್ಯ ನಡೆಯುವ ಕಾರಣ ಇಲ್ಲಿ ಹುಳದ ಕಾಟ ಕೂಡ ಹೆಚ್ಚಾಗಿ ಕಾಡಲಿದೆ. ಜತೆಗೆ ಮಳೆಯ ಮುನ್ಸೂಚನೆಯೂ ಇದೆ.
ಇದನ್ನೂ ಓದಿ IPL 2024: ಐಪಿಎಲ್ನಲ್ಲಿ ದಾಖಲೆ ಬರೆದ ಮ್ಯಾಕ್‌ಗುರ್ಕ್; ಜೈಸ್ವಾಲ್ ದಾಖಲೆ ಪತನ
ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಒಂದೊಮ್ಮೆ ಅವರು ಪಂದ್ಯದಿಂದ ಇಂಪ್ಯಾಕ್ಟ್ ಆಟಗಾರನಾಗಿ ಕೇವಲ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಬಹುದು.
ಪಂಜಾಬ್ ಗೆದ್ದಿರುವುದು ಬ್ಯಾಟಿಂಗ್ ಬಲದಿಂದ. ಹೀಗಾಗಿ ಈ ಪಂದ್ಯದಲ್ಲಿಯೂ ಪಂಜಾಬ್ ಬ್ಯಾಟಿಂಗ್ ಬಲವನ್ನೇ ನಂಬಿದೆ. ಕಳೆದೊಂದು ವರ್ಷದಿಂದ ತೀವ್ರ ಬ್ಯಾಟಿಂಗ್ ಬರ ಎದುರಿಸಿದ್ದ ಜಾನಿ ಬೇರ್ಸ್ಟೋ ಪ್ರಚಂಡ ಫಾರ್ಮ್ಗೆ ಮರಳಿದ್ದಾರೆ. ಇದು ಪಂಜಾಬ್ಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಒಟ್ಟಾರೆಯಾಗಿ ಪಂಜಾಬ್ಗೆ ಬ್ಯಾಟಿಂಗ್ಗೇ ಮುಖ್ಯ ಬಲವಾಗಿದೆ.
ಎಚ್‌ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ 12 ಐಪಿಎಲ್ ಪಂದ್ಯಗಳು ನಡೆದಿವೆ. ಈ ಪೈಕಿ 7 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದಿದ್ದರೆ, 5 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ. 2 ವಿಕೆಟ್ಗೆ 232 ರನ್ ಇಲ್ಲಿ ದಾಖಲಾದ ಅತ್ಯಧಿಕ ರನ್ ಗಳಿಕೆಯಾಗಿದೆ. 2011ರಲ್ಲಿ ಪಂಜಾಬ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್ (ನಾಯಕ), ರಿಲೀ ರೊಸೊ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಕ್.