ಧರ್ಮಶಾಲಾ: ಇಂದು ನಡೆಯುವ ಐಪಿಎಲ್ನ(IPL 2024) 58ನೇ ಪಂದ್ಯದಲ್ಲಿ ಆರ್ಸಿಬಿ(PBKS vs RCB) ಮತ್ತು ಪಂಜಾಬ್ ಕಿಂಗ್ಸ್ ಸೆಣಸಾಟ ನಡೆಸಲಿದೆ. ಈ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ(rcb vs pbks weather report) ಕಾಡಿದೆ. ಇದು ಉಭಯ ತಂಡಗಳಿಗೂ ಚಿಂತೆ ಪಡುವಂತೆ ಮಾಡಿದೆ. ಏಕೆಂದರೆ ಎರಡೂ ತಂಡಗಳಿಗೂ ಪ್ಲೇ ಆಫ್ಗೆ ಕ್ಷೀಣ ಅವಕಾಶ ಹೊಂದಿದ್ದು ಗೆಲ್ಲಲೇ ಬೇಕಾದ ಒತ್ತಡವಿದೆ.
ಸದ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಸಂಜೆಯ ಹೊತ್ತಿಗೆ, ಧರ್ಮಶಾಲಾದ ತಾಪಮಾನವು(dharamsala weather) ಸುಮಾರು 20 ಡಿಗ್ರಿ ಸೆಲ್ಸಿಯಸ್‌ನಲ್ಲಿರಲಿದೆ ಎನ್ನಲಾಗಿದೆ. ರಾತ್ರಿ ವೇಳೆ ಶೇ. 44 ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಬುಧವಾರ ಕೂಡ ಭಾರೀ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಇತ್ತಂಡಗಳು ಕೂಡ ಟೂರ್ನಿಯಿಂದ ಹೊರಬೀಳಲಿದೆ.
ಮುಖಾಮುಖಿ
ಪಂಜಾಬ್ ಮತ್ತು ಆರ್ಸಿಬಿ ಇದುವರೆಗೆ ಐಪಿಎಲ್ನಲ್ಲಿ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಂಜಾಬ್ 17 ಪಂದ್ಯ ಗೆದ್ದರೆ, ಆರ್ಸಿಬಿ 15 ಪಂದ್ಯಗಳನ್ನು ಗೆದ್ದಿದೆ. ಧರ್ಮಶಾಲಾದಲ್ಲಿ ಒಂದು ಪಂದ್ಯ ಆಡಿದ್ದು, ಈ ಪಂದ್ಯವನ್ನು ಪಂಜಾಬ್ ಜಯಿಸಿದೆ. ಈ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿತ್ತು. ಈ ಸೋಲಿಗೆ ಸೇಡು ತಿರಿಸಲು ಪಂಜಾಬ್ ಕಾದು ಕುಳಿತಿದೆ.
ಎಚ್‌ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ 12 ಐಪಿಎಲ್ ಪಂದ್ಯಗಳು ನಡೆದಿವೆ. ಈ ಪೈಕಿ 7 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದಿದ್ದರೆ, 5 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ. 2 ವಿಕೆಟ್ಗೆ 232 ರನ್ ಇಲ್ಲಿ ದಾಖಲಾದ ಅತ್ಯಧಿಕ ರನ್ ಗಳಿಕೆಯಾಗಿದೆ. 2011ರಲ್ಲಿ ಪಂಜಾಬ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.
ಇದನ್ನೂ ಓದಿ IPL 2024 Points Table: ಸನ್ರೈಸರ್ಸ್ಗೆ 10 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ
ಪಿಚ್ ರಿಪೋರ್ಟ್
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್ ಓವಲ್, ನ್ಯೂಜಿಲ್ಯಾಂಡ್ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ರಾತ್ರಿ ಪಂದ್ಯ ನಡೆಯುವ ಕಾರಣ ಇಲ್ಲಿ ಹುಳದ ಕಾಟ ಕೂಡ ಹೆಚ್ಚಾಗಿ ಕಾಡಲಿದೆ.
ಡು ಪ್ಲೆಸಿಸ್ ಆಡುವುದು ಅನುಮಾನ
ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಒಂದೊಮ್ಮೆ ಅವರು ಪಂದ್ಯದಿಂದ ಇಂಪ್ಯಾಕ್ಟ್ ಆಟಗಾರನಾಗಿ ಕೇವಲ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಬಹುದು.
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್ (ನಾಯಕ), ರಿಲೀ ರೊಸೊ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಕ್.