ನವ ದೆಹಲಿ: ದಿನದಿಂದ ದಿನಕ್ಕೆ Indian Premier League ಗಾತ್ರವನ್ನು ವೃದ್ಧಿಸಿ ಆದಾಯ ಹೆಚ್ಚಿಸುವ ಕಡೆಗೆ ಬಿಸಿಸಿಐ ಚಿಂತನೆ ನಡೆಸಿದರೆ, ಬಿಸಿಸಿಐ ಸಂಪತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕಣ್ಣು ಕುಕ್ಕುತ್ತಿದೆ. ಹೀಗಾಗಿ ಎರಡೂವರೆ ತಿಂಗಳ ಕಾಲ ಐಪಿಎಲ್ ನಡೆಸುವ ಬಿಸಿಸಿಐ ಚಿಂತನೆಗೆ ಕ್ಯಾತೆ ತೆಗೆಯಲು ಆರಂಭಿಸಿದೆ. ಅಂತೆಯ ಮುಂದಿನ ಐಸಿಸಿ ಸಭೆಯಲ್ಲಿ ಈ ಬಗ್ಗೆ ಆಕ್ಷೇಪ ಎತ್ತುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.
೨೦೦೮ರ ಮುಂಬಯಿ ದಾಳಿಯ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ಅಟಗಾರರನ್ನು ಐಪಿಎಲ್‌ಗೆ ಸೇರಿಸಿಕೊಳ್ಳುತ್ತಿಲ್ಲ. ಜತೆಗೆ ಐಪಿಎಲ್ ಕಾರಣಕ್ಕೆ ಬೇರೆ ಟೂರ್ನಿಗಳೂ ಆಯೋಜನೆಗೊಳ್ಳುವುದಿಲ್ಲ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಹುತೇಕ ರೆಸ್ಟ್. ಹೀಗಾಗಿ ಆಗಸ್ಟ್ ೨೨ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುವುದಾಗಿ ರಾಜಾ ಹೇಳಿದ್ದಾರೆ.
“ಐಪಿಎಲ್ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟತೆ ಹೊಂದಿದೆ. ನಮ್ಮ ಆಟಗಾರರಿಗೆ ಅಲ್ಲಿ ಅವಕಾಶ ದೊರೆಯುವುದಿಲ್ಲ ಹಾಗೂ ದ್ವಿಪಕ್ಷೀಯ ಟೂರ್ನಿಗಳೂ ನಡೆಯುವುದಿಲ್ಲ. ಹೀಗಾಗಿ ಐಪಿಎಲ್‌ಗೆ ಬೆಂಬಲ ನೀಡುವ ಪ್ರಶ್ನೆಯೇ ಬರುವುದಿಲ್ಲ,ʼʼ ಎಂದು ರಮೀಜ್ ರಾಜಾ ಹೇಳಿದ್ದಾರೆ.
ಪಾಕ್‌ಗೆ ನಷ್ಟ
ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ಲಭಿಸಿದರೆ ಶೇಕಡಾ ೧೦ ಲಾಭಾಂಶ ದೊರೆಯುತ್ತದೆ. ಹೀಗಾಗಿ ಪಾಕಿಸ್ತಾನ ಸಹಜವಾಗಿಯೇ ವಿರೋಧ ಮಾಡುತ್ತಿದೆ.
“ಐಪಿಎಲ್ ಅಯೋಜನೆಯಿಂದ ಎಲ್ಲ ಕ್ರಿಕೆಟ್ ಮಂಡಳಿಗಳು ಪ್ರಯೋಜನಪಡುವಾಗ ಪಾಕಿಸ್ತಾನ ಕ್ರಿಕೆಟ್‌ಮಂಡಳಿ ಒಂದನ್ನೇ ಬಲಿಪಶು ಮಾಡುವುದು ಸರಿಯಲ್ಲ. ಹೀಗಾಗಿ ದೀರ್ಘ ಅವಧಿಯ ಐಪಿಎಲ್‌ಗೆ ವಿರೋಧ ವ್ಯಕ್ತಪಡಿಸುತ್ತೇವೆ,ʼʼ ಎಂದು ರಮೀಜ್ ರಾಜಾ ಹೇಳಿದ್ದಾರೆ.ʼ
ಲಂಕಾದಲ್ಲೇ ನಡೆಯಲಿ ಏಷ್ಯಾ ಕಪ್
ಮುಂಬರುವ ಏಷ್ಯಾ ಕಪ್ ಶ್ರೀಲಂಕಾದಲ್ಲೇ ನಡೆಯಲಿ ಎಂಬ ಹಕ್ಕೊತ್ತಾಯವನ್ನೂ ಸಭೆಯಲ್ಲಿ ಮಂಡಿಸುವುದಾಗಿ ರಮೀಜ್ ರಾಜಾ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇರುವ ಕಾರಣ ಏಷ್ಯಾ ಕಪ್ ಟಿ೨೦ ಕ್ರಿಕೆಟ್ ಬೇರೆ ಕಡೆಗೆ ಸ್ಥಳಾಂತರಿರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಪಿಸಿಬಿ ಅದಕ್ಕೆ ವಿರೋಧ ವ್ಯಕ್ತಪಡಿಸಲಿದೆ.
ಇದನ್ನೂ ಓದಿ | ಕ್ರಿಕೆಟ್ ಕ್ಷೇತ್ರದಲ್ಲಿ BCCI ಮೀರಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ