ಅಹಮದಾಬಾದ್: ಏಕದಿನ ಕ್ರಿಕೆಟ್ ವಿಶ್ವಕಪ್ನ ಮಹಾ ಸಮರ ನ.19ಕ್ಕೆ ಕೊನೆಗೊಳ್ಳಲಿದೆ. ಫೈನಲ್(World Cup Final) ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ವಿಶ್ವದ ಅತಿ ದೊಡ್ಡ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್(Zaka Ashraf) ಕೂಡ ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ಅಹಮದಾಬಾದ್‌ನಲ್ಲಿ ಶನಿವಾರ ಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಝಾಕಾ ಅಶ್ರಫ್ ಭಾರತಕ್ಕೆ ಆಗಮಿಸಿದ್ದಾರೆ. ಅವರೊಂದಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಾಸಿರ್ ಕೂಡ ಇರಲಿದ್ದಾರೆ. ಈ ಸಭೆಯ ಬಳಿಕ ಭಾನುವಾರ ನಡೆಯುವ ಫೈನಲ್ ಪಂದ್ಯಕ್ಕೂ ಇವರು ಹಾಜರಿರಲಿದ್ದಾರೆ ಎನ್ನಲಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ.
ಅಕ್ಟೋಬರ್ 14ರಂದು ಇದೇ ಮೈದಾನದಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್ ಲೀಗ್ ಪಂದ್ಯಕ್ಕೆ ಝಾಕಾ ಅಶ್ರಫ್ ಅವರು ಅಹಮದಾಬಾದ್‌ಗೆ ಬಂದಿದ್ದರು. ಈ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಇದಕ್ಕೂ ಮುನ್ನ ಪಾಕ್ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್ನ ಪಂದ್ಯವೊಂದಕ್ಕೆ ಬಿಸಿಸಿಐ ಅಧ್ಯಕ್ಷ ರೋಜನ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕ್ಗೆ ತೆರಳಿ ಪಂದ್ಯವೊಂದನ್ನು ವೀಕ್ಷಿಸಿದ್ದರು.
ಪಂದ್ಯಾವಳಿಯ ಮಾದರಿ, ತಾಣಗಳ ಕುರಿತ ಚರ್ಚೆ ಸಾಧ್ಯತೆ
ಶನಿವಾರ ನಡೆಯುವ ಐಸಿಸಿ ಕಾರ್ಯಕಾರಣಿ ಸಭೆಯಲ್ಲಿ ಪಂದ್ಯಾವಳಿಯನ್ನು 50 ಓವರ್ನಲ್ಲಿ ನಡೆಸುವುದೋ ಅಥವಾ ಟಿ20 ಮಾದರಿಯಲ್ಲಿ ನಡೆಸುವುದುದೋ ಎಂಬ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಿ ನಡೆಯುವ ಕಾರಣ ಪಾಕ್ನಲ್ಲಿ ಪಂದ್ಯಗಳು ನಡೆದರೆ ಭಾರತ ಇಲ್ಲಿ ಆಡುವುದಿಲ್ಲ. ಹೀಗಾಗಿ ಪಂದ್ಯದ ತಾಣದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ ICC World Cup 2023 : ವಿಶ್ವ ಕಪ್ನಲ್ಲಿ ಭಾರತಕ್ಕೆ ಆಸೀಸ್ ತಂಡ ಆಘಾತ ಕೊಟ್ಟ 3 ಸಂದರ್ಭಗಳು
ಅಗ್ರ 7 ತಂಡಗಳಿಗೆ ಅರ್ಹತೆ
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆದ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿತ್ತು.
ಅರ್ಹತೆ ಪಡೆದ ತಂಡಗಳು
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ.
2025 ಸ್ವರೂಪವನ್ನು ಬದಲಾಯಿಸುತ್ತದೆಯೇ?
ಟಿ 20 ವಿಶ್ವಕಪ್ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ, 8 ತಂಡಗಳ ಐಸಿಟಿ ಟಿ20 ಕ್ರಿಕೆಟ್ ಟೈಮ್ಟೇಬಲ್ ಹೆಚ್ಚುತ್ತದೆ. 2024, 2026 ಮತ್ತು 2028ರಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ 50 ಓವರ್ಗಳ ಸ್ವರೂಪವು ಮೊದಲಿನಷ್ಟು ಜನಪ್ರಿಯವಾಗಿಲ್ಲ. ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅರ್ಧ ಖಾಲಿ ಕ್ರೀಡಾಂಗಣಗಳು ಈ ಮಾತಿಗೆ ಸಾಕಷ್ಟು ಪುರಾವೆಗಳನ್ನು ನೀಡಿವೆ.
ಆದಾಗ್ಯೂ ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಐಸಿಸಿ ಮುಂದಿನ ವಾರ ಅಹಮದಾಬಾದ್‌ನಲ್ಲಿ ಸಭೆ ಸೇರಲಿದ್ದು, ಇದು ಚರ್ಚೆಯ ಭಾಗವಾಗಬಹುದು. ಆದಾಗ್ಯೂ, ಐಸಿಸಿ ಡಿಸ್ನಿ ಸ್ಟಾರ್ನ ವಿನಂತಿಯನ್ನು ಅನುಮೋದಿಸಿದರೆ, ಅದು ಆಟಗಾರರಲ್ಲಿ ಜನಪ್ರಿಯವಲ್ಲದ ಸ್ವರೂಪವನ್ನು ಕೊನೆಗೊಳಿಸುವ ಸಾಧ್ಯತೆಯಿದೆ.