ಮುಂಬಯಿ: ಏಷ್ಯಾ ಕಪ್ ಆತಿಥ್ಯ ವಹಿಸುವುದು ಇತ್ತೀಚಿನ ವಾರಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿ ಆಯೋಜನೆ ಎಲ್ಲಿ ಎಂಬುದರ ವಿಚಾರದಲ್ಲಿ ಪಟ್ಟು ಬಿಡುತ್ತಿಲ್ಲ. ಭಾರತ ತಂಡದ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಹೇಳಿದ ಬಳಿಕ ಭಾರತ ತಂಡಕ್ಕೆ ಮಾತ್ರ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸುವ ಹೈಬ್ರಿಡ್ ಮಾದರಿಯನ್ನು ಮುನ್ನಲೆಗೆ ತರಲಾಗಿತ್ತು. ಅದನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾ ಕಪ್ ಆತಿಥ್ಯವನ್ನೇ ತ್ಯಜಿಸಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಐದು ರಾಷ್ಟ್ರಗಳ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ ಎಂಬುದಾಗಿ ವರದಿಯಾಗಿದೆ.
ಹೈಬ್ರಿಡ್ ಮಾದರಿಯ ಯೋಜನೆಯನ್ನೇ ಮಾಡಬೇಕು ಎಂದು ಪಿಸಿಬಿ ದೃಢವಾಗಿ ಹೇಳಿದರೆ, ಏಷ್ಯಾ ಕಪ್ 2023ರಲ್ಲಿ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಬೇರೆ ರಾಷ್ಟ್ರದಲ್ಲಿ ಟೂರ್ನಿ ನಡೆಸುವ ಯೋಜನೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ. ಈ ಮುನ್ಸೂಚನೆ ಇರುವ ಕಾರಣ ಐದು ರಾಷ್ಟ್ರಗಳ ನಡುವಿನ ಟೂರ್ನಿಗೆ ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ ಎಂದು ಹೇಳಲಾಗಿದೆ.
2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಪಾಕಿಸ್ತಾನ ಅವಕಾಶ ಪಡೆದಿದೆ. ಹೀಗಾಗಿ ಈ ಸಮಸ್ಯೆಯನ್ನು ಈಗಲೇ ಪರಿಹರಿಸಲು ಪಿಸಿಬಿಗೆ ಸಲಹೆ ಬಂದ ಕಾರಣ ತಟಸ್ಥ ರಾಷ್ಟ್ರದ ಪ್ರಸ್ತಾಪವನ್ನು ಪಾಕಿಸ್ತಾನ ತಿರಸ್ಕರಿಸಿದೆ. ಹೀಗಾಗಿ ಆತಿಥ್ಯ ಬಿಟ್ಟುಕೊಡುವುದೇ ಪಿಸಿಬಿಗಿರುವ ಆಯ್ಕೆ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾ ಕ್ರಿಕೆಟ್ ಸಮಿತಿಗೆ ಇಕ್ಕಟ್ಟು ತಂದರೆ, ಟೂರ್ನಿ ಆಯೋಜಿಸುವುದು ಬಿಸಿಸಿಐ ಪ್ಲ್ಯಾನ್.
ವಿಶೇಷವೆಂದರೆ, ಎರಡು ವಾರಗಳ ಹಿಂದೆ, ಏಷ್ಯಾ ಕಪ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಸದಸ್ಯ ರಾಷ್ಟ್ರಗಳ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ICC World Cup 2023: ಬಾಂಗ್ಲಾದಲ್ಲಿ ವಿಶ್ವಕಪ್ ಪಂದ್ಯ ಸುಳ್ಳು: ಪಿಸಿಬಿಯಿಂದ ಸ್ಪಷ್ಟನೆ
“ನಾವು 2023 ರ ಏಷ್ಯಾಕಪ್‌ನ ಸ್ಥಳವನ್ನು ಅಂತಿಮಗೊಳಿಸಲು ಮತ್ತು ಭಾರತ-ಪಾಕಿಸ್ತಾನ ಪಂದ್ಯದ ಸ್ಪಷ್ಟತೆಗಾಗಿ ಇತರ ರಾಷ್ಟ್ರಗಳಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಜಯ್ ಶಾ ಇತ್ತೀಚೆಗೆ ಹೇಳಿದ್ದರು.
ಬಿಸಿಸಿಐ ಮಾತುಕತೆ
ಒಂದು ವೇಳೆ ಪಾಕಿಸ್ತಾನ ತಂಡ ತನ್ನ ಆತಿಥ್ಯವನ್ನು ತಿರಸ್ಕರಿಸಿ ಟೂರ್ನಿ ನಡೆಸದೇ ಹೋದರೆ ಆ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ಮುಂದಾಗಲಿದೆ. ಐದು ರಾಷ್ಟ್ರಗಳ ಜತೆ ಮಾತನಾಡಿದ ಟೂರ್ನಿ ನಡೆಸಿದರೆ ಮುಂದಿನ ವಿಶ್ವ ಕಪ್ಗೆ ಅಭ್ಯಾಸ ನಡೆಸಿದ ಹಾಗೆಯೂ ಆಗುತ್ತದೆ. ಹೀಗಾಗಿ ಬೇರೆಬೇರೆ ರಾಷ್ಟ್ರಗಳ ಕ್ರಿಕೆಟ್ ಸಮಿತಿ ಜತೆ ಬಿಸಿಸಿಐ ಮಾತುಕತೆ ನಡೆಸಿ ಅವರ ತಂಡವನ್ನು ಭಾರತಕ್ಕೆ ಆಹ್ವಾನಿಸಿ ಟೂರ್ನಿ ನಡೆಸಲಿದೆ.
ಬಿಸಿಸಿಐ ಈ ರೀತಿ ಮಾಡಿದರೆ ಪಾಕಿಸ್ತಾನ ತಂಡಕ್ಕೆ ದೊಡ್ಡ ನಷ್ಟ ಉಂಟಾಗಲಿದೆ. ಮೊದಲಿಗೆ ಆದಾಯದಲ್ಲಿ ನಷ್ಟವಾದರೆ, ವಿಶ್ವ ಕಪ್ಗೆ ಅಭ್ಯಾಸ ನಡೆಸುವುದು ಕೂಡ ಕಷ್ಟವಾಗಲಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರದೇ ಹೋದರೆ ನಾವು ಕೂಡ ಬರುವುದಿಲ್ಲ ಎಂದು ಪಿಸಿಬಿ ಸವಾಲು ಹಾಕಿದೆ. ಅದನ್ನು ಪಾಲಿಸಲು ಹೊರಟರೆ ಮಂದಿನ ವಿಶ್ವ ಕಪ್ನಲ್ಲಿ ಭಾಗವಹಿಸುವ ಅವಕಾಶವೂ ನಷ್ಟವಾಗಬಹುದು.