Site icon Vistara News

PCB ಕಣ್ಣು ಕುಕ್ಕಿದ ಐಪಿಎಲ್‌ ಆದಾಯ, ತಕರಾರು ಎತ್ತಿದ ರಾಜಾ

PCB

ನವ ದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಏನೇ ಮಾಡಿದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತರಕಾರು (PCB) ಎತ್ತುವುದು ನಿಶ್ಚಿತ. ಅದು ಒಂಥರಾ “ಕೈಲಾಗದವನು ಮೈ ಪರಚಿಕೊಂಡಂತೆ’. ಇದೀಗ ಮತ್ತೊಮ್ಮೆ ಅದೇ ಚಾಳಿ ಮುಂದುವರಿಸಿದ್ದು, ಎರಡೂವರೆ ತಿಂಗಳ ಐಪಿಎಲ್‌ ನಡೆಸುವುದಾಗಿ ಬಿಸಿಸಿಐ ಘೋಷಿಸಿರುವುದರ ವಿರುದ್ಧ ಅಂತಾರಾಷ್ಟ್ರಿಯ ಕ್ರಿಕೆಟ್‌ ಸಮಿತಿಗೆ ದೂರು ನೀಡುವುದಾಗಿ ಹೇಳಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಎರಡೂವರೆ ತಿಂಗಳ ಐಪಿಎಲ್‌ ನಡೆಸುವ ಬಗ್ಗೆ ತಕರಾರು ಇರುವುದು ಅನುಮಾನ. ಯಾಕೆಂದರೆ ಐಪಿಎಲ್‌ ನಡೆಯಲಿ, ನಡಯದೇ ಹೋಗಲಿ. ಪಿಸಿಬಿಗೆ ಲಾಭ, ನಷ್ಟದ ಪ್ರಶ್ನೆಯೇ ಇಲ್ಲ. ಅಲ್ಲಿನ ಆಟಗಾರರಿಗೆ ಇಲ್ಲಿಗೆ ನೋ ಎಂಟ್ರಿ. ಹೀಗಾಗಿ ಅವಧಿ ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ. ಆದರೆ, ಇತ್ತೀಚೆಗೆ ನಡೆದ ಐಪಿಎಲ್‌ ಪಂದ್ಯಗಳ ನೇರ ಪ್ರಸಾರದ ಹಕ್ಕಿನ ಹರಾಜಿನಲ್ಲಿ ಬಿಸಿಸಿಐ 48,390 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ. ಇದು ಪಾಕ್‌ ಕ್ರಿಕೆಟ್‌ ಮಂಡಳಿಯ ಹೊಟ್ಟೆಯುರಿಗೆ ನೈಜ ಕಾರಣ. ಹೀಗಾಗಿ ‘ಪಿಳ್ಳೆ ನೆವ’ ಮುಂದೊಡ್ಡಿ ಐಪಿಎಲ್‌ನ ಸಾಮರ್ಥ್ಯವನ್ನೇ ಪ್ರಶ್ನಿಸಲು ಮುಂದಾಗಿದೆ.

ಐಸಿಸಿ ಸಭೆಯಲ್ಲಿ ಪ್ರಶ್ನೆ

ಎರಡೂವರೆ ತಿಂಗಳ ಐಪಿಎಲ್‌ ನಡೆಸುವ ಬಗ್ಗೆ ಬಿಸಿಸಿಐ ಇದುವರೆಗೆ ಪ್ರಕಟಣೆ ಹೊರಡಿಸಿಲ್ಲ. ಕೇವಲ ಘೋಷಣೆಗೆ ಸೀಮಿತವಾಗಿದೆ. ಇಂಥದ್ದೊಂದು ದೊಡ್ಡ ಬದಲಾವಣೆ ಬಗ್ಗೆ ಮುಂದಿನ ಐಸಿಸಿ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವೆ,” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮಿಜ್‌ ರಾಜಾ ಶುಕ್ರವಾರ ಹೇಳಿದ್ದಾರೆ.

“ನನ್ನ ಅಭಿಪ್ರಾಯ ಸ್ಪಷ್ಟವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾದರೆ ಅದರ ಕುರಿತು ಐಸಿಸಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಗತ್ಯ. ಬಿಸಿಸಿಐಯ ನಿರ್ಧಾರವನ್ನು ಖಂಡಿತವಾಗಿಯೂ ಪ್ರಶ್ನಿಸಲಿದ್ದೇವೆ,” ಎಂದು ರಾಜಾ ಹೇಳಿದ್ದಾರೆ.

ಏನು ಹೇಳಿದ್ದರು ಜಯ್‌ ಶಾ?

ಐಪಿಎಲ್‌ನ ೨೦೨೩-೨೭ರ ಅವಧಿಯ ೪೧೦ ಪಂದ್ಯಗಳ ನೇರ ಪ್ರಸಾರದ ಹಕ್ಕಿನ ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಇತ್ತೀಚೆಗೆ ನಡೆಸಿತ್ತು. ಈ ಪ್ರಕ್ರಿಯೆಗೆ ದೊಡ್ಡ ಮಟ್ಟದ ಉದ್ಯಮಗಳಿಂದ ದೊಡ್ಡ ಮಟ್ಟದ ಬೆಂಬಲ ದೊರಕಿತ್ತು. ಒಟ್ಟಾರೆ 48,390 ಕೋಟಿ ರೂಪಾಯಿ ಸಂಗ್ರಹಿಸಿ ಇದುವರೆಗಿನ ಎಲ್ಲ ದಾಖಲೆ ಮುರಿದಿತ್ತು. ಅಲ್ಲದೆ, ಜಗತ್ತಿನ ಎರಡನೇ ಅತಿ ಶ್ರೀಮಂತ ಕ್ರೀಡಾ ಲೀಗ್‌ ಎಂಬ ಖ್ಯಾತಿ ತನ್ನದಾಗಿಸಿಕೊಂಡಿದೆ.

ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ “ಪ್ರಸಾರದ ಹಕ್ಕಿನ ಮಾರಾಟದಿಂದ ಬಿಸಿಸಿಐಗೆ ಸಂತಸವಾಗಿದೆ. ಅಂತೆಯೇ ಮುಂದಿನ ಫ್ಯೂಚರ್‌ ಟೂರ್‌ ಪ್ರೋಗ್ರಾಂ (ಎಫ್‌ಟಿಪಿ) ನಲ್ಲಿ ಎರಡೂವರೆ ತಿಂಗಳ ಐಪಿಎಲ್‌ ನಡೆಸಲು ಯೋಜನೆ ರೂಪಿಸಲಾಗುವುದು. ಅದರಿಂದ ಹೆಚ್ಚು ವಿದೇಶಿ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗಲಿದೆ. ಈ ಬಗ್ಗೆ ನಾನಾ ಕ್ರಿಕೆಟ್‌ ಮಂಡಳಿಗಳ ಜತೆ ಮಾತುಕತೆ ನಡೆಸುತ್ತೇವೆ,” ಎಂದು ಹೇಳಿದ್ದರು.

ಭಾರತ ಜತೆ ಕ್ರಿಕೆಟ್‌ ಆಡುತ್ತೇವೆ

ಪಾಕಿಸ್ತಾನ ಜತೆ ಕ್ರಿಕೆಟ್ ಆಡದಿರುವುದರಿಂದ ಬಿಸಿಸಿಐಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿಲ್ಲ. ಆದರೆ, ಟೀಮ್‌ ಇಂಡಿಯಾ ಅವರ ನೆಲಕ್ಕೆ ಕಾಲಿಡದೇ ಹೋಗಿರುವುದು ಪಿಸಿಬಿ ಪಾಲಿಗೆ ಭಾರಿ ನಷ್ಟ ಉಂಟು ಮಾಡಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರತಿ ಬಾರಿಯೂ ಭಾರತದ ಜತೆ ಕ್ರಿಕೆಟ್‌ ಆಡಲು ಸಿದ್ಧರಿದ್ದೇವೆ ಎಂದು ಹೇಳುತ್ತಿದೆ. ರಮಿಜ್‌ ರಾಜಾ ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ “ರಾಜಕೀಯ ವಿಷಯ ಬದಿಗಿರಲಿ. ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್‌ ಪಂದ್ಯ ನಡೆಯಲೇಬೇಕಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಜತೆ ಹಲವು ಬಾರಿ ಈ ಕುರಿತು ಮಾತುಕತೆ ನಡೆಸಿದ್ದೇನೆ. ಎರಡೆರಡು ಬಾರಿ ಅವರು ಐಪಿಎಲ್‌ ಫೈನಲ್‌ ಪಂದ್ಯದ ವೀಕ್ಷಣೆಗೆ ಆಹ್ವಾನ ಕೊಟ್ಟಿದ್ದರು. ಆದರೆ, ಪರಿಸ್ಥಿತಿ ಸರಿಯಿಲ್ಲದ ಕಾರಣ ಭೇಟಿ ನೀಡಲು ಸಾಧ್ಯವಾಗಿಲ್ಲ,” ಎಂದು ಅವರು ರಾಜಾ ಹೇಳಿದರು.

ಇದನ್ನೂ ಓದಿ| the 6ixty: ಹೊಸ ಮಾದರಿಯ ಕ್ರಿಕೆಟ್‌ ಲೀಗ್‌ ಜಾರಿಗೆ ತಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ

Exit mobile version