Site icon Vistara News

Asia Cup 2023 : ಸತಾಯಿಸಿದ್ದಕ್ಕೆ ಪಾಕ್​ಗೆ ತಕ್ಕ ಪಾಠ ಕಲಿಸಿದ ಜಯ್​ ಶಾ; ಪೇಚಿಗೀಡಾದ ಪಿಸಿಬಿ!

Asia Cup 2023

#image_title

ಕರಾಚಿ: ಏಷ್ಯಾ ಕಪ್​ ಮತ್ತು ವಿಶ್ವ ಕಪ್​ ವೇಳಾಪಟ್ಟಿ ಪ್ರಕಟಿಸುವ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯನ್ನು ಸತಾಯಿಸಿತ್ತು. ಸಮಯಕ್ಕೆ ಸರಿಯಾಗಿ ಕರಡು ವೇಳಾಪಟ್ಟಿಗೆ ಅನುಮೋದನೆ ಕೊಡದೇ ಬೇಸರ ಮೂಡುವಂತೆ ಮಾಡಿತ್ತು. ಅದೇ ರೀತಿ ವಿಶ್ವ ಕಪ್​ನಲ್ಲಿ ತನಗೆ ಸಿಕ್ಕಿರುವ ಆಟದ ತಾಣವನ್ನು ಬದಲಾಯಿಸುವಂತೆ ಪದೇಪದೆ ಕೇಳುವ ಮೂಲಕ ಸಮಸ್ಯೆ ಉಂಟು ಮಾಡಿತ್ತು. ಇದೀಗ ಅದಕ್ಕೆ ತಕ್ಕ ಉತ್ತರ ಎಂಬಂತೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್​ ಕೌನ್ಸಿಲ್ ಅಧ್ಯಕ್ಷ ಜಯ್​ ಶಾ ಅವರು ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅವರ ಉತ್ಸಾಹವೆಲ್ಲವನ್ನೂ ಕುಗ್ಗಿಸಿಬಿಟ್ಟಿದ್ದಾರೆ.

ಏಷ್ಯಾ ಕಪ್​ ಕ್ರಿಕೆಟ್​ ಪಂದ್ಯದ ವೇಳಾಪಟ್ಟಿ ಪ್ರಕಟಗೊಳಿಸುವುದಕ್ಕಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಎಸಿಸಿ ಅಧ್ಯಕ್ಷ ಜಯ್ ಶಾ ಕಾರ್ಯಕ್ರಮಕ್ಕೆ ಅರ್ಧಗಂಟೆ ಮೊದಲೇ ಏಷ್ಯಾಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದರು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದೆ. , ಏಷ್ಯಾ ಕಪ್ ದಿನಾಂಕಗಳು ಮತ್ತು ಟ್ರೋಫಿಯನ್ನು ಅನಾವರಣಗೊಳಿಸಲು ಪಿಸಿಬಿ ಲಾಹೋರ್​​ನಲ್ಲಿ ಅಧಿಕೃತ ಸಮಾರಂಭವನ್ನು ಆಯೋಜಿಸಿತ್ತು. ಕಾರ್ಯಕ್ರಮ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಜಯ್ ಶಾ ವೇಳಾಪಟ್ಟಿಯನ್ನು ಘೋಷಿಸಿದ ತಕ್ಷಣ ಅಭಿಮಾನಿಗಳ ಕುತೂಹಲ ತಣ್ಣಗಾಗಿ ಕಾರ್ಯಕ್ರಮ ನಿರೀಕ್ಷೆಯಷ್ಟು ಯಶಸ್ಸು ಪಡೆದಿರಲಿಲ್ಲ.

ಲಾಹೋರ್​​ನಲ್ಲಿ ಸಮಾರಂಭ ಪ್ರಾರಂಭವಾದ ಐದು ನಿಮಿಷಗಳ ನಂತರ ಏಷ್ಯಾ ಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಪಿಸಿಬಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹೇಳಿತ್ತು ಆದರೆ ಸಮಾರಂಭ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು, ಸಂಜೆ 7.15 ರ ಸುಮಾರಿಗೆ, ಜಯ್ ಶಾ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಬೇಸರ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಸ್ಪಷ್ಟನೆ

ತಪ್ಪು ಗ್ರಹಿಕೆಯ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಪಿಸಿಬಿಗೆ ಏಷ್ಯನ್ ಕ್ರಿಕೆಟ್​ ಕೌನ್ಸಿಲ್​ ಸಮಜಾಯಿಷಿ ನೀಡಿದೆ ಎನ್ನಲಾಗಿದೆ. ಆದರೆ, ವೇಳಾಪಟ್ಟಿಯನ್ನು ಅನಾವರಣಗೊಳಿಸಿದ ಶಾ ಅವರ ಟ್ವೀಟ್ ನಿಂದಾಗಿ ನಮ್ಮ ಈವೆಂಟ್ ಪ್ರಸ್ತುತತೆಯನ್ನು ಕಳೆತುಕೊಂಡಿತು ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : Asia Cup 2023 : ಏಷ್ಯಾ ಕಪ್​ನಲ್ಲಿ ಭಾರತ ತಂಡದ ಪಂದ್ಯಗಳ ದಿನಾಂಕ, ಸಮಯ ಇನ್ನಿತರ ಮಾಹಿತಿ ಇಲ್ಲಿದೆ

ಎಸಿಸಿಯ ವಿವರಣೆಯು ಸಮಯದ ವ್ಯತ್ಯಾಸ ಮತ್ತು ತಪ್ಪು ತಿಳುವಳಿಕೆಯಿಂದ ಆದ ಘಟನೆ ಎನ್ನಲಾಗಿದೆ. ಆದರೆ, ಭಾರತದ ಸಮಯ ಪಾಕಿಸ್ತಾನದ ಸಮಯಕ್ಕಿಂತ ಅರ್ಧ ಗಂಟೆ ಮುಂದಿದೆ. ಆದ್ದರಿಂದ ಜಯ್ ಶಾ ಅವರ ಪ್ರಕಟಣೆ ಸಮಸ್ಯೆ ಉಂಟು ಮಾಡಿದೆ ಎನ್ನಲಾಗಿದೆ.

ಐಸಿಸಿ ವಾರ್ಷಿಕ ಸಭೆ ಡರ್ಬಾನ್​ನಲ್ಲಿ ನಡೆದಿತ್ತು. ಈ ವೇಳೆಯೂ ಕೆಲವೊಂದು ಸಂಗತಿಗಳು ಗೊಂದಲಕ್ಕೆ ಕಾರಣವಾಗಿದ್ದವು. ಪಿಸಿಬಿ ಅಧ್ಯಕ್ಷ ಅಶ್ರಫ್ ಮತ್ತು ಕ್ರೀಡಾ ಸಚಿವ ಅಹ್ಸಾನ್ ಮಜಾರಿ ವೃತ್ತಿಪರರಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಮಜಾರಿ ಮತ್ತು ಪಿಸಿಬಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ವರದಿಯ ಪ್ರಕಾರ ಸಭೆಯ ಕುರಿತು ಗೊಂದಲಗಳ ಉಂಟಾಗಿದ್ದವು. ಪಾಕಿಸ್ತಾನದಲ್ಲಿ ಆಡಲು ಅವರು ನೀಡಿದ ಆಹ್ವಾನವನ್ನು ಜಯ್​ ಶಾ ಸ್ವೀಕರಿಸಿದ್ದಾರೆಯೇ ಎಂಬ ವಿಷಯದ ಕುರಿತು ಚರ್ಚೆಗಳು ನಡೆದಿದ್ದವು.

ಏಷ್ಯಾ ಕಪ್ 2023

ಆಗಸ್ಟ್ 30ರಂದು ಮುಲ್ತಾನ್​ನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ನೇಪಾಳವನ್ನು ಎದುರಿಸಲಿದೆ. ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಹೋರಾಟ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾಕಪ್ 2013 ರ ಮೊದಲ ಸೂಪರ್ 4 ಪಂದ್ಯ ಸೇರಿದಂತೆ 13 ಪಂದ್ಯಗಳು ನಡೆಯಲಿವೆ. ಮೊದಲ ನಾಲ್ಕು ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ನಂತರ ಲಂಕಾದಲ್ಲಿ ನಡೆಯಲಿದೆ.

Exit mobile version