ನವ ದೆಹಲಿ: 2023ರ ವಿಶ್ವಕಪ್ ಟೂರ್ನಿಯಲ್ಲಿ (World Cup 2023) ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಆಂತರಿಕ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಪಿಸಿಬಿ ಐದು ಸ್ಥಳಗಳ ಬಗ್ಗೆ ಸರ್ಕಾರಕ್ಕೆ ಏನಾದರೂ ಆಕ್ಷೇಪವಿದೆಯೇ ಎಂದು ಕೇಳಿದೆ. ಬಾಬರ್ ಅಜಮ್ ಪಡೆ ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತಾ ಮತ್ತು ಅಹಮದಾಬಾದ್ನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಈ ಪಂದ್ಯದ ಸ್ಥಳಗಳನ್ನು ಅಂತಿಮಗೊಳಿಸುವಂತೆ ಹೇಳಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ನಲ್ಲಿ ಭಾಗವಹಿಸಲು ಪಿಸಿಬಿ ಸರ್ಕಾರದಿಂದ ಅನುಮತಿ ಕೋರಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನ ರಾಜಕೀಯ ಸಂಬಂಧಗಳಿಂದಾಗಿ, ಭಾರತಕ್ಕೆ ಪ್ರಯಾಣಿಸಲು ಅಲ್ಲಿನ ತಂಡಕ್ಕೆ ಅಧಿಕೃತ ಅನುಮತಿಯ ಅಗತ್ಯವಿದೆ. ಆದ್ದರಿಂದ ಪಿಸಿಬಿ ಜೂನ್ 26ರಂದು ಈ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿ ಪತ್ರವನ್ನು ಬರೆದಿದೆ.
ಭಾರತದಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ (World Cup 2023) ಭಾಗವಹಿಸುವ ಬಗ್ಗೆ ಮಾರ್ಗದರ್ಶನ ನೀಡಲು ಪಿಸಿಬಿ ಅಧಿಕೃತವಾಗಿ ಸರ್ಕಾರವನ್ನು ಸಂಪರ್ಕಿಸಿದೆ” ಎಂದು ಪಿಸಿಬಿ ವಕ್ತಾರರು ಜಿಯೋ ಟಿವಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : World Cup 2023: ಹೆದರಬೇಡಿ, ಟೈಟ್ ಸೆಕ್ಯುರಿಟಿ ಕೊಡ್ತೇವೆ; ಪುಕ್ಕಲು ಪಾಕಿಸ್ತಾನ ತಂಡಕ್ಕೆ ಭರವಸೆ!
ಮುಂದಿನ ಹಂತಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ನಾವು ಸರಕಾರದ ಅನುಮತಿ ಕೋರಿದ್ದೇವೆ. ಎಲ್ಲ ನಿರ್ಧಾರಗಳು ಸಂಪೂರ್ಣವಾಗಿ ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟಿದ್ದು. ಪಂದ್ಯಗಳ ತಾಣಗಳ ಪರಿಶೀಲನೆ ಮತ್ತು ಟೂರ್ನಿಯ ಆಯೋಜಕರೊಂದಿಗೆ ಸಭೆಗಳನ್ನು ನಡೆಸುವುದು, ಅದಕ್ಕಾಗಿ ಭಾರತಕ್ಕೆ ತಂಡವನ್ನು ಕಳುಹಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸರಕಾರದ ಸೂಚನೆ ಅನುಸಾರ ನಡೆಸುತ್ತೇವೆ ಎಂಬುದಾಗಿ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನ ವಿಶ್ವಕಪ್ 2023 ವೇಳಾಪಟ್ಟಿ
ಪಾಕಿಸ್ತಾನ ವಿಶ್ವಕಪ್ 2023 ವೇಳಾಪಟ್ಟಿ
- ಅಕ್ಟೋಬರ್ 6: ಕ್ವಾಲಿಫೈಯರ್ 1ರ ವಿರುದ್ಧ, ಹೈದರಾಬಾದ್
- ಅಕ್ಟೋಬರ್ 12: ಕ್ವಾಲಿಫೈಯರ್2ರ ವಿರುದ್ಧ, ಹೈದರಾಬಾದ್
- ಅಕ್ಟೋಬರ್ 15: ಭಾರತ ವಿರುದ್ಧ, ಅಹಮದಾಬಾದ್
- ಅಕ್ಟೋಬರ್ 20: ಆಸ್ಟ್ರೇಲಿಯಾ ವಿರುದ್ಧ, ಬೆಂಗಳೂರು
- ಅಕ್ಟೋಬರ್ 23: ಅಫ್ಘಾನಿಸ್ತಾನ ವಿರುದ್ಧ, ಚೆನ್ನೈ
- ಅಕ್ಟೋಬರ್ 27: ದಕ್ಷಿಣ ಆಫ್ರಿಕಾ ವಿರುದ್ಧ, ಚೆನ್ನೈ
- ಅಕ್ಟೋಬರ್ 21: ಬಾಂಗ್ಲಾದೇಶ ವಿರುದ್ಧ, ಕೋಲ್ಕೊತಾ
- ನವೆಂಬರ್ 5: ನ್ಯೂಜಿಲೆಂಡ್ ವಿರುದ್ಧ, ಬೆಂಗಳೂರು
- ನವೆಂಬರ್ 12: ಇಂಗ್ಲೆಂಡ್ ವಿರುದ್ಧ, ಕೋಲ್ಕೊತಾ
ಕಳೆದ ವಾರ ವಿಶ್ವ ಕಪ್ ವೇಳಾಪಟ್ಟಿಯನ್ನು ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿತ್ತು. ಆದಾಗ್ಯೂ ಪಾಕಿಸ್ತಾನ ತಂಡ ಇನ್ನೂ ನಮ್ಮ ಸರಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಹೇಳುತ್ತಿದೆ. 2016ರ ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿಲ್ಲ. ಅಲ್ಲದೆ ಮುಂದಿನ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಗಾಗಿ ಉಭಯ ತಂಡಗಳು ಪರಸ್ಪರ ಪ್ರಯಾಣಿಸುವ ಬಗ್ಗೆ ವಾದ ವಿವಾದಗಳು ಆರಂಭಗೊಂಡಿವೆ. ಭಾರತವು ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ ಎಂದು ಬಿಸಿಸಿಐ ಹೇಳಿದ್ದರಿಂದ, ಆಗಸ್ಟ್ 31ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿರುವ ಏಷ್ಯಾ ಕಪ್ ಅನ್ನು ಈಗ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿದೆ.
ಪ್ರಸ್ತುತ ಪಾಕಿಸ್ತಾನ ಸರ್ಕಾರದ ಅವಧಿ ಆಗಸ್ಟ್ನಲ್ಲಿ ಕೊನೆಗೊಳ್ಳುವುದರಿಂದ, ಹೊಸ ಸರಕಾರ ರಚನೆಯಾಗುವ ತನಕ ಭಾರತ ಪ್ರವಾಸದ ಬಗ್ಗೆ ಯಾವುದೇ ನಿರ್ಧಾರ ಪ್ರಕಟವಾಗದು ಎಂದು ನಿರೀಕ್ಷಿಸಲಾಗಿದೆ. 2016ರಲ್ಲಿ ಭಾರತವು ಟಿ20 ವಿಶ್ವಕಪ್ ಆತಿಥ್ಯ ವಹಿಸಿದ್ದಾಗ ಮಾಡಿದಂತೆ ಕೊನೇ ಹಂತದವರೆಗೂ ತೀರ್ಮಾನ ಪ್ರಕಟವಾಗದು.