ರಿಯೋ ಡಿ ಜನೈರೊ: ಬ್ರೆಜಿಲ್‌ನ ಫುಟ್ಬಾಲ್ ದಿಗ್ಗಜ ಪೀಲೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಉಸಿರಾಟದ ಸೋಂಕಿನ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಸಾವೊ ಪಾಲೊ ಆಲ್ಬರ್ಟ್ ಐನ್‌ಸ್ಟಿನ್ ಆಸ್ಪತ್ರೆ ಭಾನುವಾರ ಅಪ್‌ಡೇಟ್ ನೀಡಿದೆ. ಜತೆಗೆ ಪೀಲೆಯೂ ತಾನು ಆರೋಗ್ಯವಾಗಿದ್ದೇನೆ ಎಂದು ಹೇಳುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ.
ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿರುವ ಬ್ರೆಜಿಲ್‌ನ ಫುಟ್ಬಾಲ್ ದಿಗ್ಗಜ ಪೀಲೆ, ಕಿಮೋಥೆರಪಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾಜನಕವಾಗಿದ್ದು ಅವರನ್ನು ಉಪಶಮನದ ಆರೈಕೆಗೆ ವರ್ಗಾಯಿಸಲಾಗಿದೆ ಎಂದು ಶನಿವಾರ ವರದಿಯಾಗಿತ್ತು. ಈ ಸುದ್ದಿ ಪ್ರಕಟಗೊಂಡ ಕೆಲವೇ ಗಂಟೆಗಳ ಬಳಿಕ ಇದೀಗ ಪೀಲೆ ಅವರು ತಾವು ‘ಬಲಶಾಲಿ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಆತಂಕವನ್ನು ಹೋಗಲಾಡಿಸಿದ್ದಾರೆ.
ಪೀಲೆ ಇನ್ಸ್ಟಾಗ್ರಾಮ್ ಪೋಸ್ಟ್
“ನನ್ನ ಸ್ನೇಹಿತರೇ, ನಾನು ಎಲ್ಲರನ್ನೂ ಶಾಂತವಾಗಿ ಮತ್ತು ಸಕಾರಾತ್ಮಕವಾಗಿ ಇರಿಸಲು ಬಯಸುತ್ತೇನೆ. ನಾನು ಬಲಶಾಲಿಯಾಗಿದ್ದೇನೆ, ಬಹಳಷ್ಟು ಭರವಸೆಯೊಂದಿಗೆ ನಾನು ಎಂದಿನಂತೆ ನನ್ನ ಚಿಕಿತ್ಸೆಗೆ ಸ್ಪಂದಿಸುತ್ತಿದ್ದೇನೆ. ನನ್ನ ಆರೈಕೆ ಮಾಡುತ್ತಿರುವ ಸಂಪೂರ್ಣ ವೈದ್ಯಕೀಯ ಮತ್ತು ನರ್ಸಿಂಗ್ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೀಲೆ ತಿಳಿಸಿದ್ದಾರೆ.
ದೇವರ ಹಾರೈಕೆ
“ನಾನು ದೇವರಲ್ಲಿ ಬಹಳಷ್ಟು ನಂಬಿಕೆ ಹೊಂದಿದ್ದೇನೆ. ದೇವರ ಆಶೀರ್ವಾದ ನನ್ನ ಮೇಲೆ ಇರುವವರೆಗೆ ನಾನು ಆರೋಗ್ಯಯುತವಾಗಿರುತ್ತೇನೆ ಎಂಬ ನಂಬಿಕೆ ನನ್ನಲ್ಲಿದೆ. ಪ್ರಪಂಚದಾದ್ಯಂತ ನಾನು ನಿಮ್ಮಿಂದ ಸ್ವೀಕರಿಸುವ ಪ್ರೀತಿಯ ಪ್ರತಿಯೊಂದು ಸಂದೇಶವೂ ವನನಗೆ ಮತ್ತಷ್ಟು ಶಕ್ತಿ ನೀಡುತ್ತದೆ. ಅದೇ ರೀತಿ ಕತಾರ್ ವಿಶ್ವ ಕಪ್‌ನಲ್ಲಿ ಬ್ರೆಜಿಲ್ ತಂಡವನ್ನು ಬೆಂಬಲಿಸಿ. ಎಲ್ಲರಿಗೂ ತುಂಬಾ ಧನ್ಯವಾದಗಳು” ಎಂದು ಪೀಲೆ ಬರೆದಕೊಂಡಿದ್ದಾರೆ. 82 ವರ್ಷದ ಪೀಲೆ ಕಳೆದ ಮಂಗಳವಾರ ಕ್ಯಾನ್ಸರ್ ಚಿಕಿತ್ಸೆಯ ಪರಿಶೀಲನೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ | Pele Health | ಚಿಕಿತ್ಸೆಗೆ ಸ್ಪಂದಿಸದ ಫುಟ್ಬಾಲ್ ದಿಗ್ಗಜ ಪೀಲೆ, ಎಂಡ್ ಆಫ್ ಲೈಫ್ ಕೇರ್‌ಗೆ ರವಾನೆ