ಸಿಕ್ಕಿಂ: ಮಣಿಪುರದ 16 ವರ್ಷದ ವೇಗಿ ಪೀರೋಯಿಜಮ್ ಸಿಂಗ್ ರಣಜಿ ಕ್ರಿಕೆಟ್ನ ಪದಾರ್ಪಣ ಪಂದ್ಯದಲ್ಲೇ 9 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಿಕ್ಕಿಂ ವಿರುದ್ಧ ನಡೆಯುತ್ತಿರುವ ರಣಜಿ ಕ್ರಿಕೆಟ್ ಟ್ರೋಫಿಯ ಪಂದ್ಯದಲ್ಲಿ ಮಣಿಪುರದ ಈ ಪೋರ ತನ್ನ ಬೌಲಿಂಗ್ ಕರಾಮತ್ತಿನ ಮೂಲಕ ಇದೀಗ ಎಲ್ಲಡೆ ಸುದ್ದಿಯಾಗಿದ್ದಾನೆ. ಒಟ್ಟು 22 ಓವರ್ಗಳನ್ನು ಎಸೆದ ಪೀರೋಯಿಜಮ್ ಸಿಂಗ್ 5 ಮೇಡನ್ ಸಹಿತ 69 ರನ್ ನೀಡಿ 9 ವಿಕೆಟ್ ಕಿತ್ತು ಮಿಂಚಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದಾಖಲಾದ 10ನೇ ಮತ್ತು ಭಾರತದ ಪರ ನಾಲ್ಕನೇ ಅತ್ಯುತ್ತಮ ಚೊಚ್ಚಲ ಪಂದ್ಯದಲ್ಲಿ ಮೂಡಿಬಂದ ದಾಖಲೆಯಾಗಿದೆ. ಇವರ ಈ ಮಾರಕ ದಾಳಿಗೆ ಸಿಲುಕಿ ಸಿಕ್ಕಿಂ ತಂಡ 220 ರನ್ಗೆ ಆಲೌಟ್ ಆಯಿತು.
1956-57ರಲ್ಲಿ ವಸಂತ ರಾಜಾನೆ (35ಕ್ಕೆ9), 1971-72 ರಲ್ಲಿ ಅಮರ್ಜೀತ್ ಸಿಂಗ್ (45ಕ್ಕೆ 9), 2019-20ರಲ್ಲಿ ಸಂಜಯ್ ಯಾದವ್(52ಕ್ಕೆ9) ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ನೂತನವಾಗಿ ಪೀರೋಯಿಜಮ್ ಸಿಂಗ್ ಸೇರಿದ್ದಾರೆ. ಉತ್ತಮ ಬ್ಯಾಟಿಂಗ್ ಕೂಡ ಮಾಡಬಲ್ಲ ಪೀರೋಯಿಜಮ್ ಆಲ್ರೌಂಡರ್ ಆಗಿದ್ದಾರೆ.
ಇದನ್ನೂ ಓದಿ | Arjun Tendulkar | ಅಪ್ಪನಂತೆ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್ ತೆಂಡೂಲ್ಕರ್!