ಬೆಂಗಳೂರು: ಅರ್ಜುನ್ ದೇಸ್ವಾಲ್ (10) ಅವರ ಸೂಪರ್ ೧೦ ಸಾಹಸದೊಂದಿಗೆ ಸರ್ವಾಂಗೀಣ ಪ್ರದರ್ಶನ ತೋರಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 39-24 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಪಿಂಕ್ ಪ್ಯಾಂಥರ್ಸ್ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ.
ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ (Pro Kabaddi) 9ನೇ ಆವೃತ್ತಿಯ ಮಂಗಳವಾರದ ಈ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ ಅವರನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ ವಿ ಅಜಿತ್ ರೇಡಿಂಗ್‌ನಲ್ಲಿ ಮತ್ತು ಅಂಕುಶ್ ಟ್ಯಾಕಲ್‌ನಲ್ಲಿ ತಲಾ 5 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಾಲ್ ವಾರಿಯರ್ಸ್ ಪರ ರೇಡಿಂಗ್‌ನಲ್ಲಿ ಶ್ರೀಕಾಂತ್ ಜಾದವ್ (6) ಹಾಗೂ ಗಿರೀಶ್ ಮಾರುತಿ(3) ಟ್ಯಾಕಲ್‌ನಲ್ಲಿ ಮಿಂಚಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಪ್ರಥಮಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 20-12 ಅಂತರದಲ್ಲಿ ಬೆಂಗಾಲ್ ವಿರುದ್ಧ ಮೇಲುಗೈ ಸಾಧಿಸಿತ್ತು. ರೇಡಿಂಗ್‌ನಲ್ಲಿ 11, ಟ್ಯಾಕಲ್‌ನಲ್ಲಿ 6 ಮತ್ತು ಆಲೌಟ್ ಮೂಲಕ 2 ಅಂಕ ಗಳಿಸಿದ ಜೈಪುರ ಪಂದ್ಯ ಗೆಲ್ಲಲು ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತ್ತು. ಮೂರು ಪಂದ್ಯಗಳಲ್ಲಿ ನಿರಂತರ ಜಯ ಗಳಿಸಿದ ಬಲಿಷ್ಠ ಬೆಂಗಾಲ್ ವಾರಿಯರ್ಸ್ ಈ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ ರೇಡಿಂಗ್‌ನಲ್ಲಿ ವೈಫಲ್ಯ ಕಂಡದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.
ಇದನ್ನೂ ಓದಿ | T20 World Cup: ಗೆಲುವಿನ ಖಾತೆ ತೆರೆದ ಲಂಕಾ; ಯುಎಇ ವಿರುದ್ಧ 79 ರನ್ ಭರ್ಜರಿ ಜಯ