ಅಹಮದಾಬಾದ್: ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್-2022 ಫೈನಲ್ ಪಂದ್ಯದ ಸಂದರ್ಭದಲ್ಲಿ ಅತಿ ದೊಡ್ಡ ಜೆರ್ಸಿಯನ್ನು ಐಪಿಎಲ್ ನಿರ್ವಾಹಕರು ಅನಾವರಣಗೊಳಿಸಿದ್ದು ಗಮನ ಸೆಳೆದಿದೆ. ಈ ಮೂಲಕ ಐಪಿಎಲ್ ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ.
ಈ ಬೃಹತ್ ಜೆರ್ಸಿ ಮೇಲೆ 15ನೇ ಆವೃತ್ತಿಯಲ್ಲಿ ಆಡಿದ 10 ತಂಡಗಳ ಲೋಗೋಗಳು ಇವೆ. ಇದು 66 ಮೀ. ಉದ್ದ ಮತ್ತು 42 ಮೀ. ಅಗಲವಿದೆ. ಈ ಐಪಿಎಲ್ ಜೆರ್ಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಸಮಾರೋಪ ಸಮಾರಂಭ ವಿಜೃಂಭಣೆಯಿಂದ ನೆರವೇರಿದ್ದು, ಕಾರ್ಯಕ್ರಮಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕಲಾ ಪ್ರದರ್ಶನ ಮೆರುಗು ನೀಡಿತು.
ಅತ್ಯಧಿಕ ಪ್ರೇಕ್ಷಕರು ಹಾಜರಾದ ಪಂದ್ಯ
ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಫೈನಲ್ ಪಂದ್ಯಕ್ಕೆ ಮೇ 29ರಂದು ಒಟ್ಟು 1,04,859 ಪ್ರೇಕ್ಷಕರು ಹಾಜರಾಗಿದ್ದರೆಂದು ನಿರ್ವಾಹಕರು ತಿಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಮಂದಿ ಹಾಜರಾದ ಕ್ರಿಕೆಟ್ ಪಂದ್ಯವಾಗಿ ಐಪಿಎಲ್ ಫೈನಲ್ ದಾಖಲೆ ಮಾಡಿದೆ.
ಇದನ್ನೂ ಓದಿ | IPL 2022 | IPLಗಷ್ಟೇ ಹೊಸಬರು, ಕ್ರಿಕೆಟ್‌ಗಲ್ಲ !: ಮೊದಲ ಟೂರ್ನಿಯಲ್ಲೇ ಗುಜರಾತ್ ಟೈಟಾನ್ಸ್ ಚಾಂಪಿಯನ್
ಭಾರತೀಯ ಕೋಚ್ ಸಾಧನೆ
ಐಪಿಎಲ್-2022 ಟೂರ್ನಿಯ ಗುಜರಾತ್ ಟೈಟನ್ಸ್ ತಂಡದ ಮುಖ್ಯ ಕೋಚ್ ಆಗಿ ಆಶಿಷ್ ನೆಹ್ರಾ ಆಯ್ಕೆಯಾದ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಮೆಗಾ ಹರಾಜಿನಲ್ಲಿ ತಂಡದ ಆಟಗಾರರ ಖರೀದಿ ವಿಧಾನದ ಮೇಲೂ ವಿಮರ್ಶೆಗಳು ಬಂದವು. ಇದರಿಂದ ಗುಜರಾತ್ ತಂಡ ಈ ಸೀಸನ್‌ನಲ್ಲಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಗಳಿಸಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಫಲಿತಾಂಶ ಮಾತ್ರ ಬೇರೆಯೇ ಆಗಿದೆ.
ಪದಾರ್ಪಣೆ ಟೂರ್ನಿಯಲ್ಲೇ ಟ್ರೋಫಿಗೆ ಗುಜರಾತ್ ತಂಡ ಮುತ್ತಿಕ್ಕಿದೆ. ಐಪಿಎಲ್ ಪ್ರಶಸ್ತಿ ಗೆದ್ದ ತಂಡದ ಭಾರತ ಮೂಲದ ಮುಖ್ಯ ಕೋಚ್ ಆಗಿ ಆಶಿಷ್ ನೆಹ್ರಾ ದಾಖಲೆ ಮಾಡಿದ್ದಾರೆ. 2008ರಿಂದ ಷೇನ್ ವಾರ್ನ್, ಡಾರೆನ್ ಲೆಹ್ಮನ್, ಸ್ಟೀಫನ್ ಫ್ಲೆಮಿಂಗ್, ಟ್ರೇವರ್ ಬೆಲಿಸ್, ಜಾನ್ ರೈಟ್, ರಿಕಿ ಪಾಂಟಿಂಗ್, ಜಯವರ್ಧನೆ, ಟಾಮ್ ಮೂಡಿ ಅವರಂತಹ ವಿದೇಶಿ ಕೋಚ್‌ಗಳು ಮಾತ್ರ ಪ್ರಶಸ್ತಿ ಗೆದ್ದಿದ್ದಾರೆ. ಸೀಸನ್‌ನಲ್ಲಿ ಬಹಳ ಕೂಲ್ ಆಗಿ ಕೆಲಸ ಮಾಡಿದ ಆಶಿಷ್ ನೆಹ್ರಾ ಈ ಪಟ್ಟಿಯಲ್ಲಿ ಸೇರಿದ ಮೊಟ್ಟ ಮೊದಲ ಭಾರತೀಯ ಹೆಡ್ ಕೋಚ್ ಆಗಿದ್ದಾರೆ. ಇನ್ನು ಈ ತಂಡದ ಸಾಧನೆಯಲ್ಲಿ ಮೆಂಟರ್(ಬ್ಯಾಟಿಂಗ್ ಕೋಚ್) ಆದ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಗ್ಯಾರಿ ಕಿರ್‌ಸ್ಟನ್ ಪಾತ್ರವೂ ಪ್ರಮುಖವಾದುದು. 2011ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಇವರ ಪಾತ್ರ ಅನನ್ಯವಾದುದು. ಇವರ ಅಮೂಲ್ಯವಾದ ಸಲಹೆಗಳು ಭಾರತ ತಂಡವನ್ನು 28 ವರ್ಷಗಳ ನಂತರ ಚಾಂಪಿಯನ್ ಆಗಿ ಮಾಡಿದವು. ಅಂತಹ ಕೋಚ್ ಗುಜರಾತ್ ತಂಡಕ್ಕೆ ಮೆಂಟರ್ ಆಗಿ ಬಂದಿರುವುದೂ ಅನುಕೂಲವಾಗಿದೆ.
ಐಪಿಎಲ್ 15ನೇ ಆವೃತ್ತಿ ವಿಜೃಂಭಣೆಯಿಂದ ನೆರವೇರಿದ್ದು, ಪದಾರ್ಪಣೆ ಟೂರ್ನಿಯಲ್ಲೇ ಗುಜರಾತ್ ಟೈಟನ್ಸ್ ಟ್ರೋಫಿ ಗೆದ್ದು ಸಾಮರ್ಥ್ಯ ಅನಾವರಣ ಮಾಡಿದೆ. ಫೈನಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣ್ಣುಮುಕ್ಕಿಸಿ ಗೆದ್ದು ಬೀಗಿದೆ. ಇನ್ನು ಪ್ರಶಸ್ತಿ ಗೆದ್ದ ತಂಡದ ಜತೆಗೆ ಇತರ ಪ್ರಶಸ್ತಿ ಪಡೆದ ಆಟಗಾರರು, ಬಹುಮಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಐಪಿಲ್-2022 ಅವಾರ್ಡ್ಸ್: ಕೋಟಿ ಕೋಟಿ ಬಹುಮಾಣ
- ಟ್ರೋಫಿ ವಿಜೇತ: ಗುಜರಾತ್ ಟೈಟನ್ಸ್, ನಗದು ಬಹುಮಾನ: 20 ಕೋಟಿ ರೂ.
- ರನ್ನರ್ ಅಪ್: ರಾಜಸ್ಥಾನ್ ರಾಯಲ್ಸ್, ನಗದು ಬಹಮಾನ: 12.50 ಕೋಟಿ ರೂ.
- ಆರೆಂಜ್ ಕ್ಯಾಪ್(ಅತ್ಯಧಿಕ ರನ್): ಜೋಸ್ ಬಟ್ಲರ್(ರಾಜಸ್ಥಾನ್ ರಾಯಲ್ಸ್-863), ನಗದು ಬಹುಮಾನ: 10 ಲಕ್ಷ ರೂ.
- ಪವರ್ ಪ್ಲೇಯರ್ ಆಫ್ ದ ಸೀಸನ್-ಬಟ್ಲರ್ (ರಾಜಸ್ಥಾನ್), ನಗದು ಬಹುಮಾನ-10 ಲಕ್ಷ ರೂ.
- ಅತ್ಯಧಿಕ ಸಿಕ್ಸರ್ ಬಾರಿಸಿದ ಬ್ಯಾಟರ್-ಬಟ್ಲರ್(ರಾಜಸ್ಥಾನ-45), ನಗದು ಬಹಮಾನ 10 ಲಕ್ಷ ರೂ.
- ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್-ಬಟ್ಲರ್(ರಾಜಸ್ಥಾನ), ನಗದು ಬಹುಮಾನ-10 ಲಕ್ಷ ರೂ.
- ಗೇಮ್ ಚೇಂಜರ್ ಆಫ್ ದ ಸೀಸನ್-ಬಟ್ಲರ್(ರಾಜಸ್ಥಾನ), ನಗದದು ಬಹಮಾನ-10 ಲಕ್ಷ ರೂ.
- ಪರ್ಪಲ್ ಕ್ಯಾಪ್(ಅಧಿಕ ವಿಕೆಟ್ ಪಡೆದ ಬೌಲರ್)-ಯಜುವೇಂದ್ರ ಚಾಹಲ್(ರಾಜಸ್ಥಾನ್-27), ನಗದು ಬಹುಮಾನ-10 ಲಕ್ಷ ರೂ.
- ಎಮರ್ಜಿಂಗ್ ಪ್ಲೇಯರ್ ಆಫ್ ದ ಸೀಸನ್-ಉಮ್ರಾನ್ ಮಲಿಕ್(ಹೈದರಾಬಾದ್), ನಗದು ಬಹಮಾನ-10 ಲಕ್ಷ ರೂ.
- ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್- ದಿನೇಶ್ ಕಾರ್ತಿಕ್(ಬೆಂಗಳೂರು), ನಗದು ಬಹುಮಾನ- ಟಾಟಾ ಪಂಚ್ ಕಾರು
- ಫೇರ್ ಪ್ಲೇ ಅವಾರ್ಡ್- ಗುಜರಾತ್ ರಾಯಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್
ಇದನ್ನೂ ಓದಿ | IPL 2022| ಹಾರ್ದಿಕ್ ಕಮಾಲ್, ನಾಯಕನಾದ ಮೊದಲ ಟೂರ್ನಿಯಲ್ಲೆ ಟ್ರೋಫಿ ಗೆದ್ದ ಪಾಂಡ್ಯ