Site icon Vistara News

ಡ್ರೆಸ್ಸಿಂಗ್​​ ರೂಮ್​ಗೆ ತೆರಳಿ ಆಟಗಾರರನ್ನು ಸಂತೈಸಿದ ಮೋದಿ; ವಿಡಿಯೊ ವೈರಲ್

Modi 1

ಅಹಮದಾಬಾದ್​: ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯ ಚೂರಾಗುವಂತೆ ಮಾಡಿತ್ತು. ಆಟಗಾರರ ಹೃದಯವನ್ನು ಹಿಂಡಿತ್ತು. ತಮ್ಮ ನೋವನ್ನು ಹೇಳಿಕೊಳ್ಳಲಾಗದೆ, ಸಹಿಸಲೂ ಆಗದೆ ಆಟಗಾರರು ಡ್ರೆಸ್ಸಿಂಗ್‌ ಕೋಣೆಯೊಳಗೆ ತಳಮಳಿಸಿದ್ದರು.
ಸೋತ ಭಾರತ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ(pm narendra modi) ಡ್ರೆಸ್ಸಿಂಗ್‌ ಕೊಠಡಿಯನ್ನು ಪ್ರವೇಶಿಸಿ ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್‌ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದ್ದರು. ಅಲ್ಲದೆ ಎಲ್ಲ ಆಟಗಾರರನ್ನು ತಬ್ಬಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದರ ಫೋಟೊಗಳು ಸೋಮವಾರ ವೈರಲ್​ ಆಗಿತ್ತು. ಇದೀಗ ಮೋದಿ ಅವರು ಡ್ರಸ್ಸಿಂಗ್​ ರೂಮ್​ನಲ್ಲಿ ಆಟಗಾರರನ್ನು ಸಂತೈಸುವ ವಿಡಿಯೊವನ್ನು ಮೋದಿ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಆಹ್ವಾನ

ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್​ ರೋಮ್​ನಲ್ಲಿ ಎಲ್ಲ ಆಟಗಾರರಿಗೂ, ಕೋಚ್​ ದ್ರಾವಿಡ್​ ಅವರಿಗೂ ಸಮಾಧಾನ ಮಾಡುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಗೃಹ ಸಚಿವ ಅಮಿತ್​ ಶಾ ಕೂಡ ಜತೆಗಿದ್ದರು. ಎಲ್ಲ ಆಟಗಾರರನ್ನು ಕೂಡ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ವಿಶೇಷ ಆಹ್ವಾನ ನೀಡಿದ್ದಾರೆ.

ಮೋದಿ ಅವರು ಧೈರ್ಯ ತುಂಬಿದ ಬಳಿಕ ಟ್ವೀಟ್‌ ಮಾಡಿದ್ದ ಶಮಿ, ‘ತಂಡದ ಬೆಂಬಲಕ್ಕೆ ನಿಂತಿರುವ ಎಲ್ಲ ಭಾರತೀಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸಿ ನಮಗೆ ಸಮಾಧಾನ ಹೇಳಿದ ಪ್ರಧಾನಿ ಮೋದಿ ಎಲ್ಲರ ಉತ್ಸಾಹವನ್ನು ಬಡಿದೆಬ್ಬಿಸಿದರು. ನಾವು ಮತ್ತೆ ತಿರುಗಿ ಬೀಳುತ್ತೇವೆ” ಎಂದು ಹೇಳಿದ್ದರು.

ಇದನ್ನೂ ಓದಿ IND vs AUS Final: ವಿಶ್ವಕಪ್​ ಸೋಲಿನ ನೋವು ಮರೆಯಲು ಒಂದು ದಿನ ರಜೆ ಕೊಟ್ಟ ಕಂಪನಿ

ರವೀಂದ್ರ ಜಡೇಜಾ ಕೂಡ ಕೃತಜ್ಞತೆ ಅರ್ಪಿಸಿ, ನಮ್ಮೆಲ್ಲರ ಹೃದಯಗಳು ಒಡೆದುಹೋಗಿವೆ. ಆದರೆ ಜನರ ಬೆಂಬಲ ಮತ್ತು ಪ್ರಧಾನಿ ಮೋದಿ ಡ್ರೆಸ್ಸಿಂಗ್‌ ರೂಮ್​ಗೆ ಆಗಮಿಸಿ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದ್ದು ಸ್ಫೂರ್ತಿದಾಯಕವಾಗಿತ್ತು ಎಂದು ಹೇಳಿಕೊಂಡಿದ್ದರು.

“ಆತ್ಮೀಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ದೇಶದ ಗಮನ ಸೆಳೆಯಿತು. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ಕಪ್​ ಗೆಲ್ಲದಿದ್ದರೂ ನೀವು ಶತಕೋಟಿ ಭಾರತೀಯರ ಹೃದಯ ಗೆದ್ದಿದ್ದೀರಿ. ನಾವು ಎಂದೂ ನಿಮ್ಮೊಂದಿಗೆ ಇರುತ್ತೇವೆ” ಎಂದು ಮೋದಿ ಟ್ವೀಟ್​ ಮೂಲಕ ಭಾರತೀಯ ಆಟಗಾರರನ್ನು ಸಂತೈಸಿದ್ದರು.

Exit mobile version