ನವದೆಹಲಿ: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಮತ್ತು ದೀಪಾವಳಿ ಆಚರಣೆಯನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಈ ವರ್ಷ ದೀಪಾವಳಿಯನ್ನು ನವೆಂಬರ್ 12ರಂದ ನಡೆಯಲಿದೆ.
ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸಿಡ್ನಿಯಲ್ಲಿ ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ಅಲ್ಬನೀಸ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಕ್ರಿಕೆಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಈ ವರ್ಷದ ಕ್ರಿಕೆಟ್ ವಿಶ್ವಕಪ್ಗಾಗಿ ನಾನು ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಎಲ್ಲಾ ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳನ್ನು ಭಾರತಕ್ಕೆ ಆಹ್ವಾನಿಸುತ್ತೇನೆ. ಆ ಸಮಯದಲ್ಲಿ, ನೀವು ಭಾರತದಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯುವ ದೀಪಾವಳಿ ಆಚರಣೆಯನ್ನು ಸಹ ನೋಡಬಹುದು ಎಂದು ಅವರು ಹೇಳಿದ್ದಾರೆ.
“ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಭೇಟಿಯಾಗಿದೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧಗಳ ಆಳವನ್ನು ಮತ್ತು ನಮ್ಮ ಪ್ರಬುದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ನಮ್ಮ ಸಂಬಂಧ ಟಿ20 ಮಾದರಿಗೆ ಪ್ರವೇಶಿಸಿದೆ ಪಿಎಂ ಮೋದಿ ಒತ್ತಿ ಹೇಳಿದರು.
ಆಸ್ಟ್ರೇಲಿಯಾದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳು ಹಿಂದು ದೇವಾಲಯಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಆಲ್ಬನೀಸ್ ಜತೆ ಚರ್ಚಿಸಿರುವುದಾಗಿ ಪ್ರಧಾನಿ ಮೋದಿ ಅವರು ಹೇಳಿದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಅಪಾಯಕ್ಕೆ ಸಿಲುಕಿಸುವ ಇಂತಹ ಅಂಶಗಳನ್ನು ಸಹಿಸುವುದಿಲ್ಲ. ಅಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಅಲ್ಬನಾನಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ : ದೇಗುಲ ಧ್ವಂಸ ಸಹಿಸಲ್ಲ; ಆಸ್ಟ್ರೇಲಿಯಾದಲ್ಲಿ ನಡೆದ ಕೃತ್ಯ ಖಂಡಿಸಿದ ಪ್ರಧಾನಿ ಮೋದಿ, ಅಲ್ಲಿನ ಪ್ರಧಾನಿ ಹೇಳಿದ್ದೇನು?
“ಭಾರತ-ಆಸ್ಟ್ರೇಲಿಯಾ ನಡುವಿನ ಸ್ನೇಹಪರ ಸಂಬಂಧಗಳಿಗೆ ಹಾನಿ ಮಾಡುವ ಯಾವುದೇ ಅಂಶಗಳನ್ನು ನಾವು ಸ್ವೀಕರಿಸುವುದಿಲ್ಲ. ಭವಿಷ್ಯದಲ್ಲಿಯೂ ಅಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿ ಅಲ್ಬನಿಸ್ ಇಂದು ಮತ್ತೊಮ್ಮೆ ನನಗೆ ಭರವಸೆ ನೀಡಿದರು” ಎಂದು ಪಿಎಂ ಮೋದಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.