ನವ ದೆಹಲಿ : ಭಾರತದ ಕ್ರೀಡಾ ಕ್ಷೇತ್ರದ ಸುವರ್ಣ ಯುಗ ಆರಂಭಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಾವೀಗ ಪಡೆದಿರುವ ಪದಕಗಳನ್ನು ಮಾನದಂಡ ಮಾಡಿಕೊಂಡು ಅಥ್ಲೀಟ್‌ಗಳ ಪ್ರದರ್ಶನವನ್ನು ವಿಮರ್ಶೆ ಮಾಡುವುದು ಸರಿಯಲ್ಲ. ಬದಲಾಗಿ ನಮ್ಮ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ನೀಡಿರುವ ಪ್ರದರ್ಶನವನ್ನು ಗಮನದಲ್ಲಿ ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಯಾಕೆಂದರೆ, ೧ ಸೆಂಟಿ ಮೀಟರ್ ವ್ಯತ್ಯಾಸದಲ್ಲಿ ಪದಕಗಳಿಂದ ವಂಚಿತರಾಗಿರುವವರೂ ಇದ್ದಾರೆ ಎಂದು ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ೨೨ ಚಿನ್ನ, ೧೬ ಬೆಳ್ಳಿ, ಹಾಗೂ ೨೩ ಕಂಚಿನ ಪದಕಗಳು ಸೇರಿದಂತೆ ಒಟ್ಟಾರೆ ೬೧ ಪದಕಗಳನ್ನು ಗೆದ್ದಿದ್ದಾರೆ. ಅವರೆಲ್ಲರ ಸಾಧನೆಯನ್ನು ಪ್ರಧಾನಿ ಮೋದಿ ಅವರು ಹೊಗಳಿದರು. ಅಂತೆಯೇ ಕ್ರೀಡಾಕೂಟಕ್ಕೆ ತೆರಳಿ ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
ಕೇವಲ ಆರಂಭ
ಭಾರತದ ಕ್ರೀಡಾಕ್ಷೇತ್ರದ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ . ಸುವರ್ಣಯುಗ ಬಾಗಿಲು ಬಡಿಯುತ್ತಿದೆ. ಅಂತೆಯೇ ನಮ್ಮ ಕ್ರೀಡಾ ವ್ಯವಸ್ಥೆಯನ್ನು ವಿಶ್ವದ ಅತ್ಯಂತ ಬಲಿಷ್ಠ ಕ್ರೀಡಾ ಕ್ರೀಡಾ ಕ್ಷೇತ್ರವಾಗಿ ಬೆಳೆಸುವ ಜವಾಬ್ದಾರಿ ನಮಗಿದೆ. ಎಲ್ಲರನ್ನೂ ಒಳಗೊಂಡಿರುವ ಕ್ರೀಡಾಕ್ಷೇತ್ರವಾಗಬೇಕಾಗಿದೆ. ನಮ್ಮ ದೇಶದ ಸಂಪತ್ತಾಗಿರುವ ಕ್ರೀಡಾಪ್ರತಿಭೆಗಳು ನಷ್ಟವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮೋದಿಯವರು ಹೇಳಿದರು.
ನಾವು ಕ್ರೀಡಾ ಕ್ಷೇತ್ರವನ್ನು ಬೆಳೆಸುವ ಜತೆಗೆ ಹೊಸ ಕ್ರೀಡೆಗಳಲ್ಲಿಯೂ ಚಾಪು ಮೂಡಿಸಲು ಆರಂಭಿಸಿದ್ದೇವೆ. ಈ ಬಾರಿ ನಾವು ಹೊಸ ಕ್ರೀಡೆ ಲಾನ್ ಬೌಲ್ಸ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಹಾಕಿಯಲ್ಲಿ ಗತ ವೈಭವ ಮರಳುವಂತೆ ಮಾಡುತ್ತಿದ್ದೇವೆ,” ಎಂದು ಮೋದಿ ಅವರು ಅಭಿಪ್ರಾಯಪಟ್ಟರು.
ಭಾರತ ಮಹಿಳೆಯರ ಕ್ರಿಕೆಟ್ ತಂಡ ಟಿ೨೦ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದಿರುವುದಕ್ಕೂ ಪ್ರಧಾನಿ ಮೋದಿ ಅವರು ಅಭಿನಂದನೆ ಸೂಚಿಸಿದರು. ಅಲ್ಲದೇ ರೇಣುಕಾ ಸಿಂಗ್ ಅವರು ತಮ್ಮ ಸ್ವಿಂಗ್ ಎಸೆತಗಳ ಮೂಲಕ ಒಟ್ಟಾರೆ ವಿಕೆಟ್‌ಗಳನ್ನು ಕಬಳಿಸಿರುವ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದರು.
ಹಲವರು ಭಾಗಿ
ಕಾಮನ್ವೆಲ್ತ್ ಕ್ರೀಡಾಕೂಟ ಮುಗಿಸಿ ಭಾರತಕ್ಕೆ ವಾಪಸಾಗಿದ್ದ ಹಲವು ಕ್ರೀಡಾಳುಗಳು ಆತಿಥ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಸ್ತಿಪಟುಗಳು, ವೇಟ್ ಲಿಫ್ಟರ್‌ಗಳು, ಬಾಕ್ಸರ್‌ಗಳು, ಷಟ್ಲರ್‌ಗಳು ಹಾಗೂ ಟೇಬಲ್ ಟೆನಿಸ್ ಆಟಗಾರರು ಮೋದಿ ನಿವಾಸಕ್ಕೆ ಬಂದಿದ್ದರು.
ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಪದಕಗಳನ್ನು ಗೆದ್ದ ಚೆಸ್ ಪಟುಗಳನ್ನೂ ಇದೇ ವೇಳೆ ಮೋದಿ ಅಭಿನಂದಿಸಿದರು.
ಇದನ್ನೂ ಓದಿ | CWG-2022 | ಕಾಮನ್ವೆಲ್ತ್ ಸಾಧಕರಿಗೆ ಶನಿವಾರ ಮೋದಿ ನಿವಾಸದಲ್ಲಿ ಆತಿಥ್ಯ