Site icon Vistara News

IOC Session : ಐಒಸಿ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

Narendra Modi

ಮುಂಬಯಿ: ಭಾರತದ ನೇತೃತ್ವದಲ್ಲಿ ನಡೆದಿದ್ದ ಜಿ-20 ಸಮಾವೇಶ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಜಾಗತಿಕವಾಗಿ ಮೆಚ್ಚುಗೆ ಕೇಳಿಬಂದಿದೆ. ಆ ಯಶಸ್ವಿ ಸಮಾವೇಶದ ನಂತರ ಇದೀಗ ಭಾರತದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಅದುವೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) 141ನೇ ಅಧಿವೇಶನ. ಮುಂಬಯಿಯಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಇದೇ ಅಕ್ಟೋಬರ್ 15ರಿಂದ 17ರ ತನಕ ಅಧಿವೇಶನ ನಡೆಯಲಿದೆ. ಅಕ್ಟೋಬರ್ 14ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನ ಉದ್ಘಾಟಿಸಲಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ವಿದೇಶದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕತಾರ್, ಜೋರ್ಡಾನ್, ಮೊನಾಕೊ, ಲಕ್ಸಂಬರ್ಗ್ ಮತ್ತು ಭೂತಾನ್ ದೇಶಗಳ ಮುಖ್ಯಸ್ಥರು, ಗ್ರೇಟ್ ಬ್ರಿಟನ್ ಮತ್ತು ಲಿಕ್ಟನ್ ಸ್ಟೈನ್‌ನ ರಾಜಮನೆತನದ ಸದಸ್ಯರೊಂದಿಗೆ ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು ಅದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಒಲಿಂಪಿಕ್ ಕ್ರೀಡೆಯಲ್ಲಿ ಈಜು ವಿಭಾಗದಲ್ಲಿ ಏಳು ಬಾರಿ ಪದಕ ವಿಜೇತ ಕಿರ್ಸ್ಟಿ ಕೊವೆಂಟ್ರಿ, ಎರಡು ಬಾರಿ ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತೆ ಯೆಲೆನಾ ಇಸೆನ್‌ಬಾಯೆವಾ, ಒಲಿಂಪಿಕ್ 10,000 ಮೀಟರ್ ವಿಭಾಗದ ಎರಡು ಬಾರಿ ಬೆಳ್ಳಿ ಪದಕ ವಿಜೇತರು ಮತ್ತು ಕೀನ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷರಾದ ಪಾಲ್ ತುರ್ಗಾಟ್, ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತರಾದ ಸೆರ್ಗೆಯ್ ಬುಬ್ಕಾ ಮತ್ತು ಒಲಿಂಪಿಕ್ ಶೂಟಿಂಗ್ ಚಾಂಪಿಯನ್ ಅಭಿನವ್ ಬಿಂದ್ರಾ, ಒಲಿಂಪಿಕ್ 1500 ಮೀ ಚಾಂಪಿಯನ್ ಮತ್ತು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷರಾದ ಸೆಬಾಸ್ಟಿಯನ್ ಕೋ ಮತ್ತು ಫಿಫಾ ಅಧ್ಯಕ್ಷರಾದ ಗಿಯಾನಿ ಇನ್ಫಾಂಟಿನೊ ಸಹ ಈ ಸಂದರ್ಭದಲ್ಲಿ ಹಾಜರಿರುತ್ತಾರೆ.

ಇವರ ಜತೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್​, ಭಾರತೀಯ ಒಲಿಂಪಿಕ್ ಸಂಸ್ಥೆ ಸೇರಿದಂತೆ ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಆತಿಥ್ಯ ತಂದ ನೀತಾ ಅಂಬಾನಿ

2022ರ ಫೆಬ್ರವರಿಯಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ ನಲ್ಲಿ ನಡೆದ ಬಿಡ್ಡಿಂಗ್ ಐಒಸಿ ಸದಸ್ಯರಾದ ನೀತಾ ಅಂಬಾನಿ ಬಿಡ್ಡಿಂಗ್ ನಲ್ಲಿ ಭಾಗವಹಿಸಿದ್ದರು. ಈ ಐತಿಹಾಸಿಕ ಸಭೆಯಲ್ಲಿ ಭಾರತದ ಪರವಾಗಿ 75 ಮತಗಳು ಚಲಾವಣೆಯಾಗಿದ್ದು, ವಿರೋಧವಾಗಿ ಕೇವಲ 1 ಮತ ಚಲಾವಣೆಯಾಯಿತು. ಹೀಗಾಗಿ 40 ವರ್ಷಗಳ ನಂತರ ಭಾರತದಲ್ಲಿ ಐಒಸಿ ಅಧಿವೇಶನ ನಡೆಯುತ್ತಿದೆ.

ಈ ಸುದ್ದಿಗಳನ್ನೂ ಓದಿ
IOC Session: ಮುಂಬೈನಲ್ಲಿ ನಡೆಯಲಿದೆ ಐತಿಹಾಸಿಕ ಒಲಿಂಪಿಕ್ಸ್​ ಅಧಿವೇಶನ; ಏನಿದರ ವಿಶೇಷ?
IOC Sessions : 40 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಐಒಸಿ ಅಧಿವೇಶನ

ಐಒಸಿ ಅಧಿವೇಶನವು ಒಲಿಂಪಿಕ್ ಕ್ರೀಡಾಕೂಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ವೋಚ್ಚ ಸಂಸ್ಥೆಯಾಗಿದೆ. ಇದು ಒಲಿಂಪಿಕ್ ಚಾರ್ಟರ್ ಅನ್ನು ಅಳವಡಿಸಿಕೊಳ್ಳುವುದು ಅಥವಾ ಪರಿಷ್ಕರಿಸುವುದು, ಐಒಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಹಾಗೂ ಒಲಿಂಪಿಕ್ಸ್‌ನ ಆತಿಥೇಯ ನಗರವನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊಂದಿರುತ್ತದೆ.

Exit mobile version