Site icon Vistara News

ಹಾಕಿ ಆಟಗಾರ ವರುಣ್ ವಿರುದ್ಧ ‘ಪೋಕ್ಸೊ’ ಪ್ರಕರಣ: ಡಿಜಿಟಲ್‌ ಸಾಕ್ಷ್ಯಾಧಾರ ಸಂಗ್ರಹ

Hockey Player Varun Kumar

ಬೆಂಗಳೂರು: ಭಾರತೀಯ ಹಾಕಿ(Hockey Player Varun Kumar) ತಂಡದ ಡಿಫೆಂಡರ್, ಅರ್ಜುನ ಪ್ರಶಸ್ತಿ ವಿಜೇತ ವರುಣ್ ಕುಮಾರ್ (Varun Kumar) ವಿರುದ್ಧ ದಾಖಲಾಗಿರುವ ‘ಪೋಕ್ಸೊ’ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ)(POCSO) ಪ್ರಕರಣದ ತನಿಖೆ ನಡೆಸುತ್ತಿರುವ ಜ್ಞಾನಭಾರತಿ ಠಾಣೆ ಪೊಲೀಸರು(Jnanabharathi Police Station), ಡಿಜಿಟಲ್‌ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ವರುಣ್ ಕುಮಾರ್(Varun Kumar) ದೂರದಾರ ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು.

ಮೂರು ದಿನಗಳ ಹಿಂದಷ್ಟೇ ವರುಣ್ ಕುಮಾರ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಯುವತಿ ಹಾಗೂ ವರುಣ್‌ ನಡುವೆ ನಡೆದಿರುವ ಮೊಬೈಲ್‌ ಸಂಭಾಷಣೆ, ಸಂದೇಶಗಳು ಹಾಗೂ ಧ್ವನಿ ಮುದ್ರಿಕೆಗಳೂ ಸೇರಿದಂತೆ ಇತರೆ ವಿವರಗಳ ಸಾಕ್ಷ್ಯಾಧಾರಗಳನ್ನು ತನಿಖೆ ದೃಷ್ಟಿಯಿಂದ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿಯೊಬ್ಬರು, ‘ವರುಣ್‌ ಅವರನ್ನು ಇನ್ನೂ ಸಂಪರ್ಕಿಸಿಲ್ಲ. ಅವರು ಹೊರ ರಾಜ್ಯದಲ್ಲಿದ್ದು, ಶೀಘ್ರದಲ್ಲೆ ಅವರನ್ನು ವಿಚಾರಣೆಗೆ ಕರೆಸಲಾಗುವುದು. ಸದ್ಯ ಅವರು ಹಾಕಿ ತರಬೇತಿಯಲ್ಲಿರುವ ಮಾಹಿತಿಯಿದ್ದು ಅಲ್ಲಿಗೆ ಇದುವರೆಗೂ ಪೊಲೀಸ್‌ ತಂಡ ಕಳುಹಿಸಿಲ್ಲ. ವಿಚಾರಣೆಗೆ ಅವರೇ ಖುದ್ದು ಹಾಜರಾಗುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗದಿದ್ದರೆ ಅವರಿರುವ ಸ್ಥಳಕ್ಕೆ ತಂಡವನ್ನು ಕಳುಹಿಸಿ ವಿಚಾರಣೆಗೆ ಕರೆತರಲಾಗುವುದು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದ ತಂಡದ ಸದಸ್ಯರಾಗಿದ್ದ ವರುಣ್, 2019ರಲ್ಲಿ ನೈಟ್ ಡಿನ್ನರ್ ನೆಪದಲ್ಲಿ ಹೋಟೆಲ್‌ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಅರ್ಜುನ ಪ್ರಶಸ್ತಿ ಹಾಕಿ ಆಟಗಾರನ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲು

ಅಪ್ರಾಪ್ತೆಯಾಗಿದ್ದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ವರುಣ್ ಕುಮಾರ್ ಪರಿಚಯವಾಗಿತ್ತು. 17 ವರ್ಷದವಳಾಗಿದ್ದ ದೂರುದಾರಳನ್ನ ಪ್ರೀತಿಸುವುದಾಗಿ ನಂಬಿಸಿದ್ದ ವರಣ್​ ‘ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೇನೆ. ಅಲ್ಲಿಯವರೆಗೂ ಪ್ರೇಮಿಗಳಾಗಿ ಇರೋಣ’ ಎಂದು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. ಒಂದು ವರ್ಷದ ಹಿಂದೆ ನನ್ನ ತಂದೆ ಮೃತಪಟ್ಟಾಗ ಮನೆ ಬಳಿ ಬಂದು ಸಾಂತ್ವನ ಹೇಳಿ ಹೋಗಿದ್ದ. ಆದರೆ ಈಗ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳು. ದೂರುದಾರ ಯುವತಿ ವಾಲಿಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಕ್ಷಿಣ ವಿಭಾಗದ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.

ಭಾರತ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಮೂಲತಃ ಹಿಮಾಚಲ ಪ್ರದೇಶದವನು. 2017ರಲ್ಲಿ‌ ಭಾರತ ತಂಡದ ಪರ ಪದಾರ್ಪಣೆ ಮಾಡಿದ ಅವರು 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022 ರ ಏಷ್ಯನ್ ಗೇಮ್ಸ್‌ ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯನೂ ಕೂಡ ಆಗಿದ್ದರು.

Exit mobile version