Site icon Vistara News

ಅತಿ ವೇಗದ ಕಾರು ಚಾಲನೆ ರೋಹಿತ್​ ಶರ್ಮಗೆ 3 ಬಾರಿ ದಂಡ ವಿಧಿಸಿದ ಪೊಲೀಸ್​

Cricketer Rohit Sharmas Lamborghini

ಮುಂಬೈ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಮುಂಬೈಯಿಂದ ಪುಣೆಗೆ ಪ್ರಯಾಣಿಸುವಾಗ ಅತಿ ವೇಗವಾಗಿ ಕಾರು ಚಾಲನೆ ಮಾಡಿದ ಹಿನ್ನಲೆ ಪೊಲೀಸರು ಅವರಿಗೆ ಮೂರು ಬಾರಿ ದಂಡ ವಿಧಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ರೋಹಿತ್​ ಅವರು ತಮ್ಮ ಮುಂಬೈ ನಿವಾಸದಿಂದ ಪುಣೆಯಲ್ಲಿ ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯಕ್ಕಾಗಿ ತಮ್ಮ ನೀಲಿ ಬಣ್ಣದ ಲಂಬೋರ್ಗಿನಿ ಕಾರಿನಲ್ಲಿ ಗಂಟೆಗೆ 200 ಕಿ.ಮೀ ಕಾರು ಚಲಾಯಿಸಿದ್ದರು. ಇದೇ ಕಾರಣಕ್ಕೆ ಅತಿ ವೇಗದ ಚಾಲನೆಯ ಟ್ರಾಫಿಕ್​ ನಿಯಮದ ಅಡಿಯಲ್ಲಿ ಅವರಿಗೆ ಮೂರು ಟ್ರಾಫಿಕ್ ದಂಡದ ಚಲನ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯ ಬಳಿಕ ರೋಹಿತ್​ ಅವರು ಕುಟುಂಬದೊಂದಿಗೆ ಎರಡು ದಿನಗಳನ್ನು ಮುಂಬೈಯ ನಿವಾಸದಲ್ಲಿ ಕಳೆದಿದ್ದರು. ಇದಾದ ಬಳಿಕ ಪುಣೆಗೆ ತೆರಳಿದ್ದಾರೆ. ಈ ವೇಳೆ ಅವರು ತಮ್ಮ ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿ ತೊಂದರೆಗೆ ಸಿಲುಕಿದ್ದಾರೆ. ರೋಹಿತ್​ ಅವರು ತಮಗೆ ವಿಧಿಸಿದ ದಂಡವನ್ನು ಕಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ರೋಹಿತ್​ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ ರೋಹಿತ್​ ಗುರುವಾರ ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ.

ಇದನ್ನೂ ಓದಿ ನಂ.1 ಸ್ಥಾನಕ್ಕೆ ಗಿಲ್​-ಬಾಬರ್​ ಪೈಪೋಟಿ; ಭಾರಿ ಜಿಗಿತ ಕಂಡ ರೋಹಿತ್​ ಶ್ರೇಯಾಂಕ

ಬೌಲಿಂಗ್​ ಅಭ್ಯಾಸ ನಡೆಸಿದ ರೋಹಿತ್​

ರೋಹಿತ್​ ಶರ್ಮ ಅವರು ಬೌಲಿಂಗ್​ ಅಭ್ಯಾಸ ನಡೆಸಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಇಲ್ಲಿ ರೋಹಿತ್​ ಅವರು ರವೀಂದ್ರ ಜಡೇಜಾ, ವಿರಾಟ್​ ಕೊಹ್ಲಿ ಸೇರಿ ಇನ್ನೂ ಕೆಲ ಆಟಗಾರರಿಗೆ ಬೌಲಿಂಗ್​ ಮಾಡಿದ್ದಾರೆ. ಅಲ್ಲದೆ ರವೀಂದ್ರ ಜಡೇಜಾ ಅವರನ್ನು ಔಟ್​ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ನಡೆಸುವ ಸಾಧ್ಯತೆಯೂ ಅಧಿಕವಾಗಿದೆ.

ಬೌಲಿಂಗ್​ ಸಾಧನೆ

ರೋಹಿತ್​ ಶರ್ಮ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ ಬಾಳ್ವೆಯ ಆರಂಭಿಕ ದಿನಗಳಲ್ಲಿ ಆಲ್​ರೌಂಡರ್​ ಪಾತ್ರ ನಿರ್ವಹಿಸುತ್ತಿದ್ದರು. ಸ್ಪಿನ್​​ ಬೌಲಿಂಗ್​ ನಡೆಸಿ ವಿಕೆಟ್​ ಕೂಡ ಕೀಳುತ್ತಿದ್ದರು. ಏಕದಿನ ಕ್ರಿಕೆಟ್​ನಲ್ಲಿ 8 ವಿಕೆಟ್​, ಟೆಸ್ಟ್​ನಲ್ಲಿ 2 ಮತ್ತು ಟಿ20ಯಲ್ಲಿ ಒಂದು ಹಾಗೂ ಐಪಿಎಲ್​ನಲ್ಲಿ 15 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 27ಕ್ಕೆ 2 ವಿಕೆಟ್​ ಪಡೆದದ್ದು ಉತ್ತಮ ಸಾಧನೆಯಾಗಿದೆ.

ರೋಹಿತ್ ಶರ್ಮಾ ಹಾಲಿ ವಿಶ್ವ ಕಪ್​ನಲ್ಲಿ ಅತ್ಯುತ್ತಮವಾಗಿ ಫಾರ್ಮ್​ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅವರು ಅಫಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಅದೇ ರೀತಿ ಪಾಕಿಸ್ತಾನ ತಂಡದ ವಿರುದ್ಧ ಅಮೋಘ ಅರ್ಧ ಶತಕ ಬಾರಿಸಿದ್ದರು. ಈ ವೇಳೆ ಸಿಕ್ಸರ್​ಗಳ ಒಟ್ಟು ಗಳಿಕೆ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿದಿದ್ದರು. ಅವರು ಬ್ಯಾಟಿಂಗ್​ ವೈಖರಿಯಿಂದಾಗಿಯೇ ಭಾರತ ತಂಡ ಸಾಕಷ್ಟು ವಿಶ್ವಾಸ ಗಳಿಸಿದೆ. ಮುಂದಿನ ಪಂದ್ಯಗಳಲ್ಲಿ ಭರ್ಜರಿ ಯಶಸ್ಸು ಸಾಧಿಸುವ ಎಲ್ಲ ಲಕ್ಷಣವನ್ನು ತೋರುತ್ತಿದೆ

Exit mobile version