ಹ್ಯಾಂಬರ್ಗ್ (ಜರ್ಮನಿ): ಶುಕ್ರವಾರ ತಡರಾತ್ರಿ ನಡೆದ ಯುರೋ ಕಪ್(Euro 2024) ಫುಟ್‌ಬಾಲ್ ಟೂರ್ನಿಯ ಅತ್ಯಂತ ರೋಚಕ ಕ್ವಾರ್ಟರ್ ಫೈನಲ್(Euro 2024 quarterfinal) ಪಂದ್ಯದಲ್ಲಿ ಪೋರ್ಚುಗಲ್(Portugal vs France) ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳ ಅಂತರದ ಜಯ ಸಾಧಿಸಿದ ಫ್ರಾನ್ಸ್ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಜುಲೈ 10ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಸ್ಪೇನ್ ಸವಾಲನ್ನು ಎದುರಿಸಲಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ನಡುವೆ ನೇರ ಪೈಪೋಟಿಗೆ ಈ ಪಂದ್ಯ ಸಾಕ್ಷಿಯಾಗಿತ್ತು. ಇತ್ತಂಡಗಳು ಕೂಡ ಜಿದ್ದಾಜಿದ್ದಿನ ಆಟವಾಡಿದ ಪರಿಣಾಮ 20 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಗೋಲು ದಾಖಲಾಗಲಿಲ್ಲ. ಕೊನೆಗೆ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. 2022ರ ಫಿಫಾ ವಿಶ್ವಕಪ್ ಫೈನಲ್‌ನಂತೇ ಈ ಪಂದ್ಯ ಕೂಡ ಅಭಿಮಾನಿಗಳಿಗೆ ಥ್ರಿಲ್ ನೀಡಿತ್ತು. ಶೂಟೌಟ್‌ನಲ್ಲಿ ಫ್ರಾನ್ಸ್ 5 ಗೋಲು ಬಾರಿಸಿದರೆ ಪೋರ್ಚುಗಲ್ 3 ಗೋಲು ಮಾತ್ರ ಗಳಿಸಿ ಶರಣಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ರೊನಾಲ್ಡೊ ಗೋಲು ದಾಖಲಿಸಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. 39 ವರ್ಷದ ರೊನಾಲ್ಡೊ ಅವರಿಗೆ ಇದು ಕೊನೆಯ ಟೂರ್ನಿಯಾಗಿತ್ತು. ತಮ್ಮ ಸೋಲಿನಿಂದಾಗಿ ಅವರ ಕಪ್ ಗೆಲ್ಲುವ ಕನಸು ಭಗ್ನಗೊಂಡಿತು. ಪಂದ್ಯ ಮುಕ್ತಾಯದ ಬಳಿಕ ರೊನಾಲ್ಡೊ ಅತ್ಯಂತ ಬೇಸರದಿಂದಲೇ ಮೈದಾನ ತೊರೆದರು.
ಇದನ್ನೂ ಓದಿ Albania vs Spain: ಯುರೋ ಕಪ್ನಲ್ಲಿ ನಾಕೌಟ್ ಹಂತಕ್ಕೇರಿದ ಸ್ಪೇನ್
ದಿನದ ಮತ್ತೊಂದು ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಜರ್ಮನಿ ತಂಡವನ್ನು 2-1ರ ಗೋಲುಗಳಿಂದ ಮಣಿಸಿ ಸ್ಪೇನ್ ಸೆಮಿಫೈನಲ್‌ಗೆ ಪ್ರವೇಶಿಸಿತು.
ಪಂದ್ಯದ 51ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ ಅವರು ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಬಳಿಕ ಬದಲಿ ಆಟಗಾರ ಜೋಶುವಾ ಕಿಮ್ಮಿಚ್ ಅವರು 89ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ಜರ್ಮನಿ ತಂಡ ಸಮಬಲ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಆದರೆ ಹೆಚ್ಚುವರಿ ಸಮಯದಲ್ಲಿ ಮೈಕೆಲ್ ಮೆರಿನೊ 119ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಪೇನ್ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಮೂರು ಬಾರಿ ಚಾಂಪಿಯನ್ ಆಗಿರುವ ಸ್ಪೇನ್ ತಂಡದ ಈ ಬಾರಿಯ ಪ್ರದರ್ಶನ ನೋಡುವಾಗ ಮತ್ತೊಮ್ಮೆ ಚಾಂಪಿಯನ್ ಆಗುವ ಸಾಧ್ಯತೆಯೊಂದು ಕಂಡುಬಂದಿದೆ. ಸೆಮಿ ಹರ್ಡಲ್ಸ್ನಲ್ಲಿ ಬಲಿಷ್ಠ ಪ್ರಾನ್ಸ್ ಸವಾಲು ಗೆದ್ದರೆ ಸ್ಪೇನ್ ಚಾಂಪಿಯನ್ ಆಗುವುದರಲ್ಲಿ ಅನುಮಾನವೇ ಬೇಡ.