Site icon Vistara News

Team India : ಕ್ಯಾನ್ಸಲ್ ಆಗಿದ್ದ ಅಫಘಾನಿಸ್ತಾನ ವಿರುದ್ಧ ಸರಣಿಯ ಕುರಿತು ಹೊಸ ಅಪ್ಡೇಟ್​

Team India

ಮುಂಬಯಿ: ಭಾರತ (Team India) ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಜೂನ್ 2023 ರಲ್ಲಿ ಯೋಜಿಸಲಾಗಿದ್ದ ಸರಣಿಯನ್ನು ಎಸಿಬಿ ಮತ್ತು ಬಿಸಿಸಿಐ ನಡುವಿನ ಪರಸ್ಪರ ಒಪ್ಪಂದದ ಬಳಿಕ ಮುಂದೂಡಲಾಗಿತ್ತು. ಇದೀಗ ಮೂರು ಪಂದ್ಯಗಳ ಏಕದಿನ ಸರಣಿ ಈಗ 2024ರ ಜನವರಿಯಲ್ಲಿ ನಡೆಯಲಿದೆ ಎಂದು ಜುಲೈ 7 ರಂದು ಮುಂಬೈನಲ್ಲಿ ನಡೆದ ಬಿಸಿಸಿಐ (BCCI) ಸಭೆಯ ನಂತರ ಜಯ್ ಶಾ ಘೋಷಿಸಿದರು.

ದೇಶೀಯ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಗಳಿಗೆ ಹೊಸ ಮಾಧ್ಯಮ ಹಕ್ಕುಗಳ ಒಪ್ಪಂದವನ್ನು ಅಂತಿಮಗೊಳಿಸಲಾಗುವುದು ಮತ್ತು ಆಗಸ್ಟ್ ಅಂತ್ಯದ ವೇಳೆಗೆ ಸಹಿ ಹಾಕಲಾಗುವುದು ಎಂದು ಶಾ ಇದೇ ವೇಳೆ ಘೋಷಿಸಿದ್ದಾರೆ. ಈ ಒಪ್ಪಂದವು ಮುಂದಿನ ನಾಲ್ಕು ವರ್ಷಗಳ ಕ್ರಿಕೆಟ್ ಪಂದ್ಯಗಳನ್ನು ಒಳಗೊಂಡಿರುತ್ತವೆ.

ಬಿಸಿಸಿಐನ ಹೊಸ ಮಾಧ್ಯಮ ಹಕ್ಕುಗಳ ಒಪ್ಪಂದ (ಭಾರತದಲ್ಲಿ ದ್ವಿಪಕ್ಷೀಯ ಪಂದ್ಯಗಳಿಗೆ) ಆಗಸ್ಟ್ ಅಂತ್ಯದ ವೇಳೆಗೆ ಜಾರಿಗೆ ಬರಲಿದೆ. ಇದು ಆಸ್ಟ್ರೇಲಿಯಾ ವಿರುದ್ಧದ ಎಂಟು ಪಂದ್ಯಗಳ ಸರಣಿಯೊಂದಿಗೆ ಪ್ರಾರಂಭವಾಗಲಿದೆ (ಏಕದಿನ ವಿಶ್ವಕಪ್​ಗೆ ಮೊದಲು 3 ಏಕದಿನ ಪಂದ್ಯಗಳು ಮತ್ತು ವಿಶ್ವಕಪ್ ನಂತರ 5 ಟಿ 20 ಪಂದ್ಯಗಳು).

2023ರ ಏಷ್ಯನ್​ ಗೇಮ್ಸ್​ ಕ್ರೀಡಾಕೂಟಕ್ಕೆ ಮುಂಚಿತವಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ಶಾ ಹೇಳಿದ್ದಾರೆ. ಮುಖ್ಯವಾಗಿ, 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳ ಭಾಗವಹಿಸುವಿಕೆಗೆ ಬಿಸಿಸಿಐ ಅನುಮೋದನೆ ನೀಡಿದೆ. ಈ ನಿರ್ಧಾರವು ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಬಿಸಿಸಿಐ ತಂಡಗಳನ್ನು ಕಳುಹಿಸಲಿದೆ ಎಂದು ಸ್ಪಷ್ಟಪಡಿಸಿದೆ.

ನಾವು ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲಿದ್ದೇವೆ. ನಮ್ಮ ಪುರುಷ ಮತ್ತು ಮಹಿಳಾ ತಂಡಗಳ ಭಾಗವಹಿಸುವಿಕೆಗೆ ಅಪೆಕ್ಸ್ ಕೌನ್ಸಿಲ್ ಅನುಮೋದನೆ ನೀಡಿದೆ ಎಂದು ಜಯ್​ ಶಾ ಹೇಳಿದ್ದಾರೆ.

ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ​ ಚೀನಾದ ಹ್ಯಾಂಗ್ಜೌನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಬಿಸಿಸಿಐ ಪುರುಷರ ಮತ್ತು ಮಹಿಳಾ ತಂಡವನ್ನು ಕಳುಹಿಸಲಿದೆ. ನಾವು ಎರಡೂ ವಿಭಾಗಗಳಲ್ಲಿ ಚಿನ್ನದ ಪದಕ ಗೆಲ್ಲುತ್ತೇವೆ ಎಂದು ಆಶಿಸುತ್ತೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಧ್ಯಮ ಹಕ್ಕುಗಳ ಒಪ್ಪಂದ

2023-2027 ರ ಅವಧಿಗೆ ಭಾರತವನ್ನು ಒಳಗೊಂಡ ಕ್ರಿಕೆಟ್ ಪಂದ್ಯಗಳ ಪ್ರಸಾರಕ್ಕಾಗಿ ಮಾಧ್ಯಮ ಹಕ್ಕುಗಳ ಒಪ್ಪಂದವನ್ನು ಆಗಸ್ಟ್ ಅಂತ್ಯದ ವೇಳೆಗೆ ಅಂತಿಮಗೊಳಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಕ್ರವಾರ (ಜುಲೈ 7) ಹೇಳಿದ್ದಾರೆ. 2018 ರಲ್ಲಿ ಪ್ರಾರಂಭವಾದ ಸ್ಟಾರ್ ಸ್ಪೋರ್ಟ್ಸ್​ ಒಪ್ಪಂದವು ಈ ವರ್ಷದ ಮಾರ್ಚ್​ನಲ್ಲಿ ಕೊನೆಗೊಂಡಿದೆ. ಸೆಪ್ಟೆಂಬರ್​ನಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಉದ್ದೇಶಿತ 50 ಓವರ್​ಗಳ ಸರಣಿಗೆ ಮುಂಚಿತವಾಗಿ ಹೊಸ ಒಪ್ಪಂದವನ್ನು ಮಾಡಲಾಗುವುದು ಎಂದು ಶಾ ಸುಳಿವು ನೀಡಿದರು.

ಇದನ್ನೂ ಓದಿ : Team India : ಬಿಸಿಸಿಐ ಹೊಸ ನಿಯಮದ ಉರುಳು; ವಿದೇಶಿ ಲೀಗ್​ನಿಂದ ಅಂಬಾಟಿ ಎಸ್ಕೇಪ್​!

ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನಿಂದ ಭಾರತೀಯ ಆಟಗಾರರು ನಿವೃತ್ತಿ ಪಡೆಯುವುದನ್ನು ತಡೆಯಲು ಮಂಡಳಿಯು ನೀತಿಯನ್ನು ಪರಿಚಯಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ. ಇತ್ತೀಚೆಗೆ ಅಂಬಾಟಿ ರಾಯುಡು, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಅವರು ವಿದೇಶಿ ಲೀಗ್​ನಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದರು. ಇಂಥ ಪರಿಸ್ಥಿತಿಗೆ ಕಡಿವಾಣ ಹಾಕುವುದೇ ಬಿಸಿಸಿಐ ಯೋಜನೆಯಾಗಿದೆ.

ಪೂರ್ವನಿರ್ಧರಿತ ನಿವೃತ್ತಿಯ ಪ್ರವೃತ್ತಿಯನ್ನು ತಡೆಗಟ್ಟಲು ನಾವು ನೀತಿಯನ್ನು ಹೊರತರುತ್ತೇವೆ. ಪದಾಧಿಕಾರಿಗಳು ನೀತಿಯನ್ನು ರೂಪಿಸುತ್ತಾರೆ ಮತ್ತು ಅದನ್ನು ಅನುಮೋದನೆಗಾಗಿ ಕಳುಹಿಸುತ್ತಾರೆ ಎಂದು ಜಯ್​ ಶಾ ಹೇಳಿದ್ದಾರೆ.

Exit mobile version