Site icon Vistara News

NEERAJ CHOPRA ಎಂಬ ಏಕಲವ್ಯನಿಗೆ ಗುರುವಾದ ದ್ರೋಣಾಚಾರ್ಯ ಯಾರು?

ನೀರಜ್‌ ಚೋಪ್ರಾ ಯಾರಿಗೆ ಗೊತ್ತಿಲ್ಲ ಹೇಳಿ… 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ 25 ವರ್ಷದ ಯುವಕ. 87.58 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಪದಕದೊಂದಿಗೆ ದಾಖಲೆಯನ್ನೂ ಬರೆದವರು. ಭಾರತೀಯ ಸೇನೆಯಲ್ಲಿ ಸುಬೇದಾರ್‌ ಗೌರವವನ್ನು ಪಡೆದ ಬಂಗಾರದ ಹುಡುಗನ ಗೆಲುವಿನ ಕಥೆ ತುಂಬ ರೋಚಕ.

ಅವರದ್ದು ಕೃಷಿ ಕುಟುಂಬ. ಅಪ್ಪ-ಅಮ್ಮ ಮತ್ತು ಇಬ್ಬರು ಸೋದರಿಯರು. ಬಾಲ್ಯದಲ್ಲಿ ತುಂಬ ದಪ್ಪದ ಹುಡುಗನಾಗಿದ್ದ ನೀರಜ್‌ನನ್ನು ಎಲ್ಲರೂ ಗುಂಡಣ್ಣ ಎಂದೇ ತಮಾಷೆ ಮಾಡುತ್ತಿದ್ದರು. ದೇಹ ದಂಡಿಸಿಯಾದರೂ ಸ್ವಲ್ಪ ತೆಳ್ಳಗಾಗಲಿ ಎಂದು ಮಗನನ್ನು ಜಿಮ್‌ಗೆ ಸೇರಿಸಿದರು ಅಪ್ಪ. ಹರಿಯಾಣದ ಪಾಣಿಪತ್‌ನ ಸ್ಟೇಡಿಯಂನಲ್ಲಿ ಆಡುತ್ತಿದ್ದಾಗ ಜಾವೆಲಿನ್‌ ತ್ರೋ ಮಾಡುವುದನ್ನು ನೋಡಿ ಆಕರ್ಷಣೆ ಉಂಟಾಯಿತು. ಅವರ ಕೈಯಿಂದ ಕೇಳಿ ಒಂದಷ್ಟು ದೂರ ಎಸೆದು ಖುಷಿಪಡುತ್ತಿದ್ದ ನೀರಜ್‌ಗೆ ಮುಂದೆ ಇದರಲ್ಲೇ ತನ್ನ ಭವಿಷ್ಯ ಅಂತ ಅನಿಸತೊಡಗಿತ್ತು. ಮುಂದೆ ನಡೆದುದೆಲ್ಲವೂ ಇತಿಹಾಸ.gu

ನೀವೇ ಕೇಳಿ ಅವನ ಕಥೆ..
ನೀರಜ್‌ ಚೋಪ್ರಾನ ಬದುಕಿನ ಕಥೆಯನ್ನು ಯೂಟ್ಯೂಬ್‌ ಒಂದು ವಿಡಿಯೊದ ಮೂಲಕ ಪ್ರಸ್ತುತಪಡಿಸಿದೆ. ಅದರಲ್ಲಿ ಹೃದಯಕ್ಕೆ ಹತ್ತಿರವಾದ ಹಲವು ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ. ಅವರದೇ ಮಾತಲ್ಲಿದೆ ಮುಂದಿನ ಕಥೆ.

ಬಾಲ್ಯದಿಂದಲೂ ಅಷ್ಟೆ.. ಒಮ್ಮೆಗೇ ತುಂಬ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತ ನಾನಾಗಿರಲಿಲ್ಲ. ಮಾಮೂಲಿ ಹುಡುಗ ನಾನ. ಹೀಗಿರುತ್ತಾ ಒಮ್ಮೆ ಸ್ಟೇಡಿಯಂಗೆ ಹೋದೆ. ಅಲ್ಲಿ ನನಗೆ ಒಂದು ವಿಷಯ ತಿಳಿಯಿತು. ಜಾವೆಲಿನ್‌ ಅಂತ ಒಂದಿದೆ. ಅದನ್ನು ದೂರಕ್ಕೆ ಎಸೆಯಬೇಕಾಗುತ್ತದೆ. ಆಗಲೇ ಒಂದು ತೀರ್ಮಾನಕ್ಕೆ ಬಂದೆ. ಏನೇ ಆಗಲಿ, ಎಷ್ಟೇ ಕಷ್ಟವಾದರೂ ಆಗಲಿ, ಈ ವಿಷಯದಲ್ಲಿ ನಾನು ಬೆಸ್ಟ್‌ ಆಗಬೇಕು. ಎಷ್ಟು ಸಾಧ್ಯವೋ ಅಷ್ಟು ದೂರ ಎಸೆಯಬೇಕು, ಉಳಿದ ವಿಷಯ ಆಮೇಲೆ ನೋಡಿಕೊಳ್ಳೋಣ ಅಂತ ತೀರ್ಮಾನಿಸಿದೆ.

ನಾನು ಜಾವೆಲಿನ್‌ ಹಿಡಿದುಕೊಂಡು ಸ್ಟೇಡಿಯಂಗೆ ಹೋಗುವಾಗ ಅಕ್ಕಪಕ್ಕದ ಜನರೆಲ್ಲ ಕೇಳ್ತಾ ಇದ್ರು.. ಇದೆಂಥ ಮಾರಾಯಾ.. ಕೋಲು ಹಿಡಿದುಕೊಂಡು ಓಡಾಡ್ತಾ ಇದ್ದಿ.. ಆಗ ನಾನು, ಇದೊಂದು ಕ್ರೀಡೆ.. ಇದರಲ್ಲೂ ಸ್ಪರ್ಧೆಗಳು ನಡೆಯುತ್ತವೆ ಎಂದು ಹೇಳುತ್ತಿದ್ದೆ. ಆಗ ಅವರು, ಕುಸ್ತಿ, ಕಬಡ್ಡಿ, ಕ್ರಿಕೆಟ್‌ ಆಡಬಹುದಲ್ವಾ ಅನ್ನುತ್ತಿದ್ದರು.

ನಂಗೆ ಜಾವೆಲಿನ್‌ ತ್ರೋ ವಿಷಯದಲ್ಲಾದರೂ ದೊಡ್ಡ ಮಟ್ಟದ ತರಬೇತಿ ಪಡೆಯಲು ಅಷ್ಟೊಂದು ಹಣ ಎಲ್ಲ ಇರಲಿಲ್ಲ. ಆಗ ನಂಗೆ ಸಿಕ್ಕಿದ್ದು ಯೂ ಟ್ಯೂಬ್‌. ನಾನು ಯೂ ಟ್ಯೂಬ್‌ನಲ್ಲಿ ಜಗತ್ತಿನ ದೊಡ್ಡ ದೊಡ್ಡ ಜಾವೆಲಿನ್‌ ಎಸೆತಗಾರರ ವಿಡಿಯೊ ನೋಡುತ್ತಿದ್ದೆ. ಹರಿಯಾಣದ ಒಂದು ಪುಟ್ಟ ಗ್ರಾಮದಲ್ಲಿ ಕುಳಿತು ಜಗತ್ತಿನ ಅತಿ ಶ್ರೇಷ್ಠ ಜಾವೆಲಿನ್‌ ಎಸೆತಗಾರರ ವಿಡಿಯೊ ನೋಡುವುದು ದೊಡ್ಡ ಹೆಮ್ಮೆಯ ಸಂಗತಿಯೇ ಆಗಿತ್ತು. ಇದೆಲ್ಲ ಮಾರ್ಕೆಟ್‌ ನಲ್ಲಿ ಸಿಗುವ ಸಿಡಿಗಳಲ್ಲಿ ಸಿಗುತ್ತಿರಲಿಲ್ಲ. ಯೂ ಟ್ಯೂಬ್‌ನಲ್ಲಿ ಸಿಗ್ತಾ ಇದ್ದುದು ನಂಗೆ ತುಂಬಾ ಲಾಭ ಆಯಿತು.

ನಾನು ಯೂ ಟ್ಯೂಬ್‌ನಲ್ಲಿ ವರ್ಲ್ಡ್‌ ರೆಕಾರ್ಡ್‌ ಅಂತ ಸರ್ಚ್‌ ಮಾಡಿದಾಗ ಜಾನ್‌ ಜೆಲೆನ್ಜಿ ಅವರ ಹೆಸರು ಬಂತು, ಅವರ ವಿಡಿಯೊಗಳು ಬಂದವು. ಅವರು 98.4 ಮೀಟರ್‌ ದೂರ ಜಾವೆಲಿನ್‌ ಎಸೆದು ಮಾಡಿದ ವಿಶ್ವ ದಾಖಲೆಯನ್ನು ನೋಡಿದ ಮೇಲೆ ನಾನು ಇವರದ್ದೇ ವಿಡಿಯೊ ನೋಡಬೇಕು, ಇವರನ್ನೇ ಫಾಲೋ ಮಾಡಬೇಕು ಅಂತ ತೀರ್ಮಾನ ಮಾಡಿದೆ. ಅವರ ತ್ರೋ ತುಂಬ ವಿಶೇಷ. ತುಂಬ ಕಡಿಮೆ ರನ್‌ ಅಪ್‌ ತೆಗೆದುಕೊಳ್ಳುತ್ತಿದ್ದರು. ಆದರೆ, ಭಯಂಕರ ವೇಗದಲ್ಲಿ ಬೀಸಿ ಎಸೆಯುತ್ತಿದ್ದರು. ತನ್ನನ್ನು ತಾನು ಕಂಟ್ರೋಲ್‌ ಮಾಡಿಕೊಳ್ಳುತ್ತಿದ್ದ ರೀತಿಯೂ ತುಂಬ ಡಿಫರೆಂಟ್‌ ಆಗಿತ್ತು. ನಂಗೆ ಜೆಲೆನ್ಜಿ ಮತ್ತು ಯೂ ಟ್ಯೂಬ್‌ ಆತ್ಮೀಯ ಗೆಳೆಯರಂತೆಯೇ ಆಗಿಹೋದರು.

ನಾನು ಬೆಳಗ್ಗೆ ಐದು ಗಂಟೆಗೆ ಎದ್ದು ತುಂಬ ದೂರದಲ್ಲಿದ್ದ ಸ್ಟೇಡಿಯಂಗೆ ಬಸ್‌ ಹಿಡಿದು ಹೋಗುತ್ತಿದ್ದೆ. ಬಸ್‌ ಸಿಗದಿದ್ದರೆ ಯಾವುದಾದರೂ ಟ್ರ್ಯಾಕ್ಟರ್‌, ಯಾರದ್ದಾದರೂ ಬೈಕ್‌ನಲ್ಲಿ ಲಿಫ್ಟ್‌ ಪಡೆದು ಹೋಗುತ್ತಿದ್ದೆ. ಹೀಗೆ ಹೋಗುವಾಗ ಜಾವೆಲಿನ್‌ನ್ನು ಹಿಡಿದುಕೊಳ್ಳುವುದೇ ಒಂದು ಸವಾಲು ಆಗುತ್ತಿತ್ತು.

ನಾನು ಆರಂಭದ ಕೆಲವು ಸಮಯ 40 ಮೀಟರ್‌ನಷ್ಟು ದೂರಕ್ಕೆ ಜಾವೆಲಿನ್‌ ಎಸೆಯುತ್ತಿದ್ದೆ. ಅದು ನಲವತ್ತೈದಾಯಿತು, ಐವತ್ತು, ಐವತ್ತೈದಾಯಿತು. ಹಾಗೆಯೇ ನಿಧಾನವಾಗಿ 85-88ರ ವರೆಗೆ ಸಾಗಿದೆ. ನಾನು ದೂರ ದೂರಕ್ಕೆ ಎಸೆಯುತ್ತಿದ್ದಂತೆಯೇ ಮೆಡಲುಗಳು ಹೆಚ್ಚೆಚ್ಚು ಬರಲು ತೊಡಗಿದವು.

2021 ನನ್ನ ಮೊದಲ ಒಲಿಂಪಿಕ್ಸ್‌ ಆಗಿತ್ತು. ನಾನು ಪೂರ್ಣ ಫೋಕಸ್‌ ಇಟ್ಟು ಪ್ರಯತ್ನ ಮಾಡಿದೆ. ಆದರೆ, ನನ್ನ ತಲೆಯಲ್ಲಿ ಇದ್ದಿದ್ದು ಒಂದೇ ವಿಷಯ. ಜಾವೆಲಿನ್‌ ಎತ್ತಿಕೊಳ್ಳಬೇಕು, ಎಷ್ಟು ಸಾಧ್ಯವೋ ಅಷ್ಟು ದೂರ ಎಸೆಯಬೇಕು ಅಷ್ಟೆ… ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲೇ ಇಲ್ಲ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದದ್ದು ಒಂದು ಅವಿಸ್ಮರಣೀಯ ಕ್ಷಣ. ರಾಷ್ಟ್ರಗೀತೆ ಮೊಳಗುತ್ತಿತ್ತು, ರಾಷ್ಟ್ರ ಧ್ವಜ ನಿಧಾನಕ್ಕೆ ಮೇಲೇರುತ್ತಿತ್ತು. ಅದರ ನಡುವೆ ಪ್ರಶಸ್ತಿ ಸ್ವೀಕರಿಸುವ ಖುಷಿಯನ್ನು ಎಣಿಸಿಕೊಂಡರೆ ಇವತ್ತಿಗೂ ರೋಮಗಳು ಎದ್ದು ನಿಲ್ಲುತ್ತವೆ.

ಒಂದು ವಿಷಯ ನಾನು ಹೇಳಲೇಬೇಕು.. ಇದನ್ನು ಹೆಚ್ಚಿನ ಕಡೆ ಹೇಳಿಲ್ಲ ಹೇಳಿಲ್ಲ ನಾನು. ನಾನು ಚಿನ್ನದ ಪದಕವನ್ನು ಗೆದ್ದಾಗ ನನ್ನ ಹಿಂದೆ ಜಾನ್‌ ಲೆಜೆನ್ಜಿ ಕುಳಿತಿದ್ದರು. ಆದರೆ ಅವರಿಗೆ ಗೊತ್ತಿರಲಿಲ್ಲ, ಈ ಹುಡುಗ ಗೆದ್ದ ಬಂಗಾರದ ಪದಕದಲ್ಲಿ, ಭಾರತ ಗೆದ್ದ ಈ ಚಿನ್ನದ ಮೆಡಲ್‌ನ ಹಿಂದೆ ನನ್ನದೂ ಒಂದು ಪಾಲಿದೆ ಅಂತ.

Exit mobile version