Site icon Vistara News

PR Sreejesh: ಹಾಕಿ ದಿಗ್ಗಜ ಶ್ರೀಜೇಶ್​ಗೆ 2 ಕೋಟಿ ಬಹುಮಾನ ಘೋಷಣೆ ಮಾಡಿದ ಕೇರಳ ಸರ್ಕಾರ

PR Sreejesh

PR Sreejesh: Kerala government announces Rs 2 crore cash award for hockey legend PR Sreejesh

ತಿರುವನಂತಪುರಂ: ಪ್ಯಾರಿಸ್​ ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ, ಭಾರತ ಹಾಕಿ ತಂಡದ ಮಾಜಿ ಗೋಲ್​ ಕೀಪರ್​ ಪಿ.ಆರ್‌.ಶ್ರೀಜೇಶ್(PR Sreejesh) ಅವರಿಗೆ ಕೇರಳ ಸರ್ಕಾರ(Kerala government) 2 ಕೋಟಿ ನಗದು ಬಹುಮಾನ ಪ್ರಕಟಿಸಿದೆ. ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ.

‌ಕೇರಳದ ಎರ್ನಾಕುಲಂ ಜಿಲ್ಲೆಯವರಾದ ಶ್ರೀಜೇಶ್‌ ಭಾರತ ತಂಡ ಟೋಕಿಯೊ ಮತ್ತು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ​ ಯಶಸ್ಸು ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೋಕಿಯೊದಲ್ಲಿ ಅಮೋಘ ಪ್ರದರ್ಶನ ನೀಡಿದ ಕಾರಣ ಅವರಿಗೆ ಅತ್ಯುತ್ತಮ ಗೋಲ್​ ಕೀಪರ್​ ಪ್ರಶಸ್ತಿಯೂ ಲಭಿಸಿತ್ತು. ಒಟ್ಟು ನಾಲ್ಕು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ 2 ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಶ್ರೀಜೇಶ್ ಕೃಷಿ ಕುಟುಂಬದಿಂದ ಬಂದವರು. ಹಾಕಿ ಕಿಟ್ ಖರೀದಿಸಲು ತಮ್ಮ ಹಸುವನ್ನು ಮಾರಿದ ಅವರ ತಂದೆಯ ತ್ಯಾಗವು ಕ್ರೀಡೆಯಲ್ಲಿ ಅವರ ಆರಂಭಿಕ ಹಂತದ ಪ್ರಯಾಣವಾಗಿತ್ತು. ಸಾಂಪ್ರದಾಯಿಕ ಉಡುಗೆ ಮತ್ತು ಮಲಯಾಳಂ ಉಚ್ಚಾರಣೆಗಾಗಿ ಅಪಹಾಸ್ಯವನ್ನು ಎದುರಿಸುತ್ತಿದ್ದರೂ, ಶ್ರೀಜೇಶ್ ತನ್ನ ತಂದೆಯ ಅಚಲ ಬೆಂಬಲದಿಂದ ತಿರುವನಂತಪುರಂನ ಜಿವಿ ರಾಜಾ ಸ್ಪೋರ್ಟ್ಸ್ ಸ್ಕೂಲ್​ಗೆ ಸೇರಿದ್ದರು ಅಲ್ಲಿ ಅವರ ತರಬೇತುದಾರರು ಗೋಲ್ ಕೀಪಿಂಗ್ ಆಯ್ಕೆ ಮಾಡಲು ಸಲಹೆ ನೀಡಿದರು. ಈ ನಿರ್ಧಾರವು ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ನಿರ್ಣಾಯಕವಾಯಿತು.

ಇದನ್ನೂ ಓದಿ PR Sreejesh : ಕುಟುಂಬ ಸಮೇತ ಪ್ರಧಾನಿ ಮೋದಿಯನ್ನು ಭೇಟಿಯಾದ ಒಲಿಂಪಿಯನ್​ ಪಿ.ಆರ್ ಶ್ರೀಜೇಶ್​​

ಭಾರತೀಯ ಹಾಕಿಗೆ ಶ್ರೀಜೇಶ್​ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಕಳೆದ ವಾರ ಶ್ರೀಜೇಶ್ ಅವರ ಜೆರ್ಸಿ ನಂ.16ಕ್ಕೆ ವಿದಾಯ ಹೇಳಿತ್ತು. ಇನ್ನು ಮುಂದೆ ಶ್ರೀಜೇಶ್ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 16 ಅನ್ನು ಹಾಕಿ ಹಿರಿಯರ ತಂಡದ ಯಾವೊಬ್ಬ ಆಟಗಾರರಿಗೂ ನೀಡಲಾಗುವುದಿಲ್ಲ. ಪ್ಯಾರಿಸ್​ ಒಲಿಂಪಿಕ್ಸ್​ ಕಂಚಿನ ಪದಕ ಪಂದ್ಯವನ್ನಾಡುವ ಮೂಲಕ ಶ್ರೀಜೇಶ್​ ತಮ್ಮ 18 ವರ್ಷಗಳ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.​

ಶ್ರೀಜೇಶ್​ ಅವರಿಗೆ ಹಾಕಿ ಇಂಡಿಯಾ(Hockey India) ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. 36 ವಷದ ಕೇರಳದ ಶ್ರೀಜೇಶ್‌ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್‌ ಕಂಚಿನ ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

Exit mobile version