Site icon Vistara News

PR Sreejesh: ಪ್ಯಾರಿಸ್​ ಒಲಿಂಪಿಕ್ಸ್ ಕೊನೆಯ ಟೂರ್ನಿ ಎಂದು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಪಿಆರ್ ಶ್ರೀಜೇಶ್

PR Sreejesh

PR Sreejesh: PR Sreejesh Announces Retirement After Paris Olympics 2024

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಕ್ರೀಡಾಕೂಟಕ್ಕೆ ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿವೆ. ಈ ಬಾರಿ 117 ಭಾರತೀಯ ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್​ ಆರಂಭಕ್ಕೂ ಮುನ್ನ ಭಾರತೀಯ ಹಾಕಿ ತಂಡದ ಹಿರಿಯ ಆಟಗಾರ, ಗೋಲ್ ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರು ಅಂತಾರಾಷ್ಟ್ರೀಯ ಹಾಕಿಗೆ (International Hockey) ವಿದಾಯ ಹೇಳಲು ನಿರ್ಧರಿಸಿದ್ದಾರೆ(PR Sreejesh Announces Retirement). ಪ್ಯಾರಿಸ್ ಒಲಿಂಪಿಕ್ಸ್ (Paris Olympics) ತನ್ನ ಕೊನೆಯ ಅಂತಾರಾಷ್ಟ್ರೀಯ ಕೂಟವಾಗಿರಲಿದೆ ಎಂದು ಹೇಳುವ ಮೂಲಕ ವಿದಾಯ ಘೋಷಿಸಿದ್ದಾರೆ. ಇದು ಅವರ ನಾಲ್ಕನೇ ಒಲಿಂಪಿಕ್ಸ್​ ಟೂರ್ನಿಯಾಗಿದೆ.

ಕೇರಳ ಮೂಲದ ಶ್ರೀಜೇಶ್ 2006ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ಟೊಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತ ತಂಡದ ಈ ಪದಕ ಗೆಲುವಿನಲ್ಲಿ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು.

‘ನನ್ನ ಮೊದಲ ಕಿಟ್ ಖರೀದಿಸಲು ತಂದೆ ನಮ್ಮ ಹಸುವನ್ನು ಮಾರಾಟ ಮಾಡಿದ್ದು ನನಗೆ ಈಗಲೂ ನೆನಪಿದೆ. ಅವರ ತ್ಯಾಗವು ನನ್ನನ್ನು ಈ ಮಟ್ಟಕೆ ತಂದು ನಿಲ್ಲಿದೆ. ಮತ್ತು ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಿತು. ನನ್ನ ಕುಟುಂಬ, ತಂಡದ ಸಹ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಒಲಿಂಪಿಕ್, ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ಏಷ್ಯನ್ ಗೇಮ್ಸ್ ಪದಕ ಸಾಧನೆ ಶ್ರೀಜೇಶ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಪ್ರಮುಖ ಮೈಲುಗಲ್ಲು.

ಕಳೆದ ಬಾರಿ ಕಂಚಿನ ಪದಕ ಜಯಿಸಿದ್ದ ಭಾರತ ಹಾಕಿ ತಂಡ ಈ ಬಾರಿ ಹಾಲಿ ಚಾಂಪಿಯನ್‌ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲ್ಯಾಂಡ್​ ಹಾಗೂ ಐರ್ಲೆಂಡ್‌ ಜತೆ ‘ಬಿ’ ಗುಂಪಿನಲ್ಲಿದೆ. ಜುಲೈ 27ರಂದು ಕಿವೀಸ್​ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಒಲಿಂಪಿಕ್ಸ್‌ ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ.

ಇದನ್ನೂ ಓದಿ Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

ಭಾರತ ತಂಡ ಜುಲೈ 29ರಂದು ಅರ್ಜೆಂಟೀನಾ, 30ರಂದು ಐರ್ಲೆಂಡ್‌, ಆಗಸ್ಟ್ 1ರಂದು ಬೆಲ್ಜಿಯಂ, ಆಗಸ್ಟ್​ 2ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಳೆದ ಬಾರಿ ಕಂಚು ಗೆದ್ದ ಭಾರತ ಈ ಬಾರಿ ಚಿನ್ನದ ಪದಕ್ಕೆ ಕೊರಳೊಡ್ಡಲಿ ಎನ್ನುವುದು ಭಾರತೀಯರ ಆಶಯ. ‘ಎ’ ಗುಂಪಿನಲ್ಲಿ ನೆದರ್ಲೆಂಡ್ಸ್‌, ಸ್ಪೇನ್‌, ಜರ್ಮನಿ, ಫ್ರಾನ್ಸ್, ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಕ್ವಾರ್ಟರ್‌ಫೈನಲ್ ಪಂದ್ಯಗಳು ಆಗಸ್ಟ್​ 4ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆಗಸ್ಟ್​ 6 ರಂದು ನಡೆಯಲಿವೆ. ಕಂಚಿನ ಪದಕದ ಮತ್ತು ಫೈನಲ್ ಪಂದ್ಯ ಆಗಸ್ಟ್​ 8ರಂದು ನಡೆಯಲಿವೆ.

ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Exit mobile version