ನವದೆಹಲಿ: ಭಾರತ ಪುರುಷರ ಹಾಕಿ ತಂಡ ನಿನ್ನೆ(ಗುರುವಾರ) ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(paris olympics) ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಭಾರತದ ಹಾಕಿ ದಿಗ್ಗಜ ಗೋಲು ಕೀಪರ್ ಪಿ.ಆರ್ ಶ್ರೀಜೇಶ್(PR Sreejesh) ಈ ಪಂದ್ಯವನ್ನಾಡುವ ಮೂಲಕ ತಮ್ಮ 18 ವರ್ಷಗಳ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಭಾರತೀಯ ಹಾಕಿಗೆ ಅವರು ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಶ್ರೀಜೇಶ್ ಅವರನ್ನು ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.
ಈ ಬಾರಿಯ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಶ್ರೀಜೇಶ್ ಇದು ನನ್ನ ಕೊನೆಯ ಒಲಿಂಪಿಕ್ಸ್ ಎಂದು ಹೇಳಿ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಅವರಿಗೆ ಪದಕ ಗೆಲುವಿನ ವಿದಾಯ ಲಭಿಸಿದೆ. ಅದು ಕೂಡ ಸತತವಾಗಿ 2 ಪದಕಗಳ ಮೂಲಕ ಎನ್ನುವುದು ವಿಶೇಷ. 2006ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತ ತಂಡದ ಈ ಪದಕ ಗೆಲುವಿನಲ್ಲಿ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು. ಈ ಬಾರಿಯೂ ಶ್ರೀಜೇಶ್ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಪದಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
36 ವಷದ ಕೇರಳದ ಶ್ರೀಜೇಶ್ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್ ಕಂಚಿನ ಪದಕ, ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ವೃತ್ತಿಜೀವನ ಕೊನೆಗೊಳಿಸಿದ ಭಾರತ ಹಾಕಿ ತಂಡದ ಗೋಲ್ಕೀಪರ್ ಶ್ರೀಜೇಶ್ ಪಂದ್ಯದ ಬಳಿಕ ಭಾವುಕರಾದರು. ಅವರು ಗೋಲ್ಕೀಪಿಂಗ್ ಗ್ಲೌವ್ಸ್ಗಳನ್ನು ಕಳಚಿಟ್ಟು ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಕ್ರೀಡೆಗೆ ಗೌರವ ಸೂಚಿಸಿದರು. ಸ್ಪೇನ್ ವಿರುದ್ಧ ಭಾರತ 2-1 ಗೋಲುಗಳ ರೋಚಕ ಜಯ ಸಾಧಿಸಿದ ಬಳಿಕ ಎಲ್ಲರೂ ಖುಷಿಯಲ್ಲಿದ್ದ ವೇಳೆ ಶ್ರೀಜೇಶ್ ಕಣ್ಣೀರಿಟ್ಟು ನಮಸ್ಕಾರ ಹಾಕಿದರು. ಈ ವೇಳೆ ತಮ್ಮ ಗೋಲ್ ಕೀಪಂಗ್ ಸಲಕರಣೆಗಳಿಗೆ ಗರಿಷ್ಠ ಗೌರವ ಸಲ್ಲಿಸಿದರು.
ಇದನ್ನೂ ಓದಿ Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್ ಪದಕ ಗೆಲ್ಲಲು ಸಜ್ಜಾದ ಅಮನ್ ಸೆಹ್ರಾವತ್
ಕೇರಳದ ಕೊಚ್ಚಿಯ ಆಟಗಾರ
ಕೇರಳದ ಕೊಚ್ಚಿಯ ಉಪನಗರವಾದ ಕಿಝಕ್ಕಂಬಲಂನಲ್ಲಿ ಜನಿಸಿದ ಶ್ರೀಜೇಶ್ ಕೃಷಿ ಕುಟುಂಬದಿಂದ ಬಂದವರು. ಹಾಕಿ ಕಿಟ್ ಖರೀದಿಸಲು ತಮ್ಮ ಹಸುವನ್ನು ಮಾರಿದ ಅವರ ತಂದೆಯ ತ್ಯಾಗವು ಕ್ರೀಡೆಯಲ್ಲಿ ಅವರ ಆರಂಭಿಕ ಹಂತದ ಪ್ರಯಾಣವಾಗಿತ್ತು. ಸಾಂಪ್ರದಾಯಿಕ ಉಡುಗೆ ಮತ್ತು ಮಲಯಾಳಂ ಉಚ್ಚಾರಣೆಗಾಗಿ ಅಪಹಾಸ್ಯವನ್ನು ಎದುರಿಸುತ್ತಿದ್ದರೂ, ಶ್ರೀಜೇಶ್ ತನ್ನ ತಂದೆಯ ಅಚಲ ಬೆಂಬಲದಿಂದ ತಿರುವನಂತಪುರಂನ ಜಿವಿ ರಾಜಾ ಸ್ಪೋರ್ಟ್ಸ್ ಸ್ಕೂಲ್ಗೆ ಸೇರಿದ್ದರು ಅಲ್ಲಿ ಅವರ ತರಬೇತುದಾರರು ಗೋಲ್ ಕೀಪಿಂಗ್ ಆಯ್ಕೆ ಮಾಡಲು ಸಲಹೆ ನೀಡಿದರು. ಈ ನಿರ್ಧಾರವು ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ನಿರ್ಣಾಯಕವಾಯಿತು.
ಶ್ರೀಜೇಶ್ ಆರಂಭದಲ್ಲಿ ಭಾರತೀಯ ಶಿಬಿರದ ಹಿಂದಿ ಮಾತನಾಡುವ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದರು. ಗೋಲ್ ಕೀಪರ್ ಆಗಿದ್ದ ಅವರಿಗೆ ಭಾಷೆಯ ಅಡೆತಡೆಯ ಹೊರತಾಗಿಯೂ ಬೆಳೆಯಲು ಸಹಾಯವಾಯಿತು. ಆರಂಭಿಕ ವರ್ಷಗಳಲ್ಲಿ ಓಡಬೇಕಾಗುತ್ತದೆ ಎಂಬ ಕಾರಣಕ್ಕೆ ಗೋಲ್ ಕೀಪಿಂಗ್ ಅನ್ನು ಆಯ್ಕೆ ಮಾಡಿದ್ದರು. ಇದು ಅವರ ಯಶಸ್ಸಿನ ಅಡಿಪಾಯವಾಯಿತು.