ವಿಶ್ವಕಪ್ ಚೆಸ್ ಟೂರ್ನಿಯಲ್ಲಿ(Chess World Cup) 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen)ಗೆ ತೀವ್ರ ಪೈಪೋಟಿ ನೀಡಿ ಸಣ್ಣ ಅಂತರದಿಂದ ಸೋಲು ಕಂಡು ದ್ವಿತೀಯ ಸ್ಥಾನ ಪಡೆದಿದ್ದರು. 18 ವರ್ಷದಲ್ಲಿ ಈ ಮಟ್ಟದ ಸಾಧನೆ ತೋರಿದ ಪ್ರಜ್ಞಾನಂದ ಟ್ರೋಫಿ ಗೆಲ್ಲದಿದ್ದರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಅವರು ತವರಿಗೆ ಆಗಮಿಸಿದ್ದಾರೆ.
ಬುಧವಾರ ತಮಿಳುನಾಡಿನ ಚೆನ್ನೈಗೆ ಆಮಮಿಸಿದ ಪ್ರಜ್ಞಾನಂದ ಅವರನ್ನು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಹೂಗುಚ್ಛ ನೀಡಿ ಬಳಿಕ ಅವರನ್ನು ತೆರೆದ ಕಾರಿನ ಮೂಲಕ ಅದ್ಧೂರಿ ಮೆರವಣಿಗೆಯನ್ನು ಮಾಡಲಾಯಿತು. ಈ ವೇಳೆ ಅವರ ಸಹಪಾಠಿಗಳು, ಅಖಿಲ ಭಾರತ ಚೆಸ್ ಫೆಡರೇಶನ್ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.
ಚೆಸ್ ಕ್ರೀಡೆ ಬೆಳೆಯುತ್ತಿದೆ
“ನನಗೆ ತುಂಬಾ ಸಂತೋಷವಾಗಿದೆ. ಜನರು ಇಲ್ಲಿಗೆ ಬಂದು ನನ್ನನ್ನು ಗುರುತಿಸುವ ಬದಲು ಚೆಸ್ ಕ್ರೀಡೆಯನ್ನು ಗುರುತಿಸಿದ್ದಾರೆ. ಇಲ್ಲಿ ಸೇರಿರುವ ಜನರನ್ನು ನೋಡುವಾಗ ಚೆಸ್ ವೇಗವಾಗಿ ಬೆಳೆಯುತ್ತಿದೆ ಎಂದು ಅನಿಸುತ್ತಿದೆ. ವಿಶ್ವಕಪ್‌ನಲ್ಲಿ ಆಡಿರುವುದು ಸಂತಸ ತಂದಿದೆ” ಎಂದು ಪ್ರಗ್ನಾನಂದ ಹೇಳಿದರು.
30 ಲಕ್ಷ ನೀಡಿದ ತಮಿಳುನಾಡು ಸರ್ಕಾರ
ಉನ್ನತ ಸಾಧನೆ ಮಾಡಿದ ಆರ್. ಪ್ರಜ್ಞಾನಂದ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್(M. K. Stalin) ಮತ್ತು ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಅವರು ತಮ್ಮ ನಿವಾಸದಲ್ಲಿ ಭೇಟಿಯಾಗಿ 30 ಲಕ್ಷ ರೂ. ಚೆಕ್ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ನಿಮ್ಮ ಸಾಧನೆಯಿಂದ ನಮ್ಮ ರಾಜ್ಯದ ಹೆಸರು ಎಲ್ಲಡೆ ಪಸರಿಸಿದೆ. ಹೀಗೆ ಹಲವು ಸಾಧನೆಗಳನ್ನು ಮಾಡುತ್ತ ಮುನ್ನುಗ್ಗಿ ಎಂದು ಸಿಎಂ ಸ್ಟಾಲಿನ್ ಹಾರೈಸಿದರು.
ಇದನ್ನೂ ಓದಿ R Praggnanandhaa: ವೃತ್ತಿಬದುಕಿನ ಶ್ರೇಷ್ಠ ಶ್ರೇಯಾಂಕ ಪಡೆದ ಪ್ರಜ್ಞಾನಂದ
ಸದಾ ಜತೆಗಿರುವ ತಾಯಿ-ಮಗ
18 ವರ್ಷದ ಚೆಸ್ ಆಟಗಾರ ಯಾವಾಗಲೂ ತನ್ನ ತಾಯಿ ನಾಗಲಕ್ಷ್ಮಿ ಅವರ ಜತೆಗೆ ಇರುವ ಪ್ರತಿಭೆ. ತಾಯಿಯೂ ಪ್ರತಿ ಕ್ಷಣವೂ ಮಗನ ಜತೆಗೆ ಇರುತ್ತಾರೆ. ಈ ಮೂಲಕ ಅವರು ಪುತ್ರನ ಯಶಸ್ಸಿನ ಬಲವಾದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. ಅವರ ತಾಯಿ ನಾಗಲಕ್ಷ್ಮಿ ಅವರು ಚೆಸ್ ವಿಶ್ವಕಪ್ ಫೈನಲ್ ಸಮಯದಲ್ಲಿ ಪೂರ್ತಿಯಾಗಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭದ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಗುರುವಾರ ನಡೆದಿದ್ದ ಫೈನಲ್ ಪಂದ್ಯದ ಟೈ ಬ್ರೇಕರ್ನ ಮೊದಲ ಸೆಟ್ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿ, ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್ ಕಾರ್ಲ್‌ಸನ್ ಗೆದ್ದು ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್ ಆನಂದ್ ಭಾರತಕ್ಕೆ ವಿಶ್ವಕಪ್ ಗೆದ್ದಿದ್ದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.