Site icon Vistara News

Grandmaster | ಭಾರತದ 76ನೇ ಗ್ರ್ಯಾಂಡ್ ಮಾಸ್ಟರ್‌ ಆಗಿ ಹೊರಹೊಮ್ಮಿದ ಬೆಂಗಳೂರಿನ ತರುಣ ಪ್ರಣವ್‌

grandmaster

ಚೆನ್ನೈ : ಬೆಂಗಳೂರು ಮೂಲದ ತರುಣ ಪ್ರಣವ್‌ ಆನಂದ್‌ ಭಾರತದ ೭೬ನೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದು, ರೊಮೇನಿಯಾದ ಮಿಯಾಮಿಯಲ್ಲಿ ನಡೆಯುತ್ತಿರುವ ವರ್ಲ್ಡ್‌ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ೨೫೦೦ ಎಲೊ ಅಂಕಗಳನ್ನು ಸಂಪಾದಿಸುವ ಮೂಲಕ ಈ ಅರ್ಹತೆಯನ್ನು ಪಡೆದುಕೊಂಡರು. ೧೫ ವರ್ಷದ ಈ ಚೆಸ್‌ ಪ್ರತಿಭೆಗೆ ಅಂಕಗಳನ್ನು ಸಂಪಾದಿಸುವ ಮೊದಲು ಗ್ರ್ಯಾಂಡ್‌ಮಾಸ್ಟರ್‌ ಆಗಲು ಬೇಕಾದ ಎಲ್ಲ ಅರ್ಹತೆಗಳನ್ನು ಪೂರ್ಣಗೊಳಿಸಿದ್ದರು. ಹೀಗಾಗಿ ಗುರುವಾರ ತಡರಾತ್ರಿ (ಭಾರತೀಯ ಕಾಲಮಾನ) ಭಾರತದ ಮತ್ತೊಬ್ಬ ಚೆಸ್‌ ಭರವಸೆಯಾಗಿ ಕಂಡರು.

ಚೆಸ್‌ ಆಟಗಾರರೊಬ್ಬರು ಗ್ರ್ಯಾಂಡ್‌ಮಾಸ್ಟರ್‌ ಆಗಬೇಕಿದ್ದರೆ, ೨೫೦೦ ಎಲೊ ಅಂಕಗಳ ಜತೆ ಇನ್ನಷ್ಟು ಮಾನದಂಡಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅಂತೆಯೇ ಕಳೆದ ಜುಲೈಯಲ್ಲಿ ಸ್ವಿಜರ್ಲೆಂಡ್‌ನಲ್ಲಿ ನಡೆದ ೫೫ನೇ ಬೈಲ್ ಚೆಸ್‌ ಫೆಸ್ಟಿವಲ್‌ನಲ್ಲಿ ಮೂರನೇ ನಿಯಮವನ್ನು ಪೂರೈಸಿದ್ದರು.

“ಪ್ರಣವ್‌ಗೆ ಚೆಸ್‌ ಎಂದರೆ ಅತ್ಯಾಸಕ್ತಿ. ಆಟದ ಬಗೆ ವಿಪರೀತ ಮೋಹ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಎಷ್ಟು ಗಂಟೆಗಳ ಕಾಲ ಬೇಕಾದರೂ ಕೆಲಸ ಮಾಡಬಲ್ಲ,” ಎಂದು ಆನಂದ್‌ ಅವರ ಕೋಚ್‌ ವಿ ಸರವಣನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

“ಲೆಕ್ಕಾಚಾರ ಹಾಗೂ ಗೇಮ್‌ ಪೂರ್ಣಗೊಳಿಸುವುದರಲ್ಲಿ ಅವರು ನಿಸ್ಸೀಮರು. ಅದು ಅವರ ಬಲವೂ ಹೌದು,” ಎಂದು ಸರವಣನ್‌ ಅವರು ಹೇಳಿದ್ದಾರೆ.

“ಪ್ರಣವ್‌ ಅವರ ಸಾಧನೆಗೆ ಅವರ ಕುಟುಂಬವೇ ಕಾರಣ. ಅವರ ತಂದೆ ಹಾಗೂ ತಾಯಿ ಮಗನಿಗೋಸ್ಕರ ಸಾಕಷ್ಟು ಸಮಯ ಮೀಸಲಿಡುತ್ತಾರೆ,” ಎಂದು ಅವರು ಹೇಳಿದರು.

ಒಂದು ವೇಳೆ ಕೊರೊನಾ ಬರದಿದ್ದರೆ ಇನ್ನೂ ಎರಡು ವರ್ಷಗಳ ಹಿಂದೆ ಪ್ರಣವ್‌ ಗ್ರ್ಯಾಂಡ್‌ಮಾಸ್ಟರ್‌ ಆಗಿರುತ್ತಿದ್ದ. ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯಂತ ಪ್ರತಿಭಾವಂತ ಚೆಸ್‌ ಆಟಗಾರ ಆತ,” ಎಂದು ಸರವಣನ್‌ ಅವರು ಹೇಳಿದ್ದಾರೆ.

ಪ್ರಣವ್ ಅವರು ಟೂರ್ನಿಯಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳಾದ ಫ್ರಾನ್ಸ್‌ನ ಮ್ಯಾಕ್ಸಿಮ್‌ ಲಗಾರ್ಡೆ (೨೬೩೧), ಸೇತುರಾಮನ್‌ ಎಸ್‌ಪಿ (೨೬೨೩) ವಿರುದ್ಧ ಜಯ ಸಾಧಿಸಿದರೆ, ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್ಯನ್‌ ಚೋಪ್ರಾ (೨೬೧೦) ಹಾಗೂ ಅರ್ಮೇನಿಯಾದ ಸರ್ಗಸೈನ್‌ (೨೬೬೧) ವಿರುದ್ಧ ಡ್ರಾ ಸಾಧಿಸಿದರು.

Exit mobile version