ಮುಂಬಯಿ: ಇಂಗ್ಲೆಂಡ್ ವಿರುದ್ಧದ ವಿಶ್ವ ಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡದ (Team India) ಸೋಲು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಅನ್ನು ತಲ್ಲಣಗೊಳಿಸಿದೆ. ಹೀಗಾಗಿ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಹಾಗೂ ಚುಟುಕು ಕ್ರಿಕೆಟ್‌ನಲ್ಲಿ ಉತ್ತಮ ತಂಡವೊಂದನ್ನು ರಚಿಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ಮುಂದಿನ ವರ್ಷದಲ್ಲಿ ಹಿರಿಯ ಆಟಗಾರರಿಗೆ ತಂಡದಿಂದ ಕೊಕ್ ಕೊಟ್ಟು, ಯುವ ಆಟಗಾರರನ್ನು ಸೇರ್ಪಡೆಗೊಳಿಸುವುದಕ್ಕಾಗಿ ತಂತ್ರ ರೂಪಿಸಿಕೊಂಡಿದೆ.
ಹಾಲಿ ಆವೃತ್ತಿಯಲ್ಲಿ ಆಡಿರುವ ಭಾರತ ತಂಡದಲ್ಲಿ ೩೦ ವರ್ಷ ದಾಟಿದವರೇ ಹೆಚ್ಚಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ದಿನೇಶ್ ಕಾರ್ತಿಕ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಅದಕ್ಕೆ ಉದಾಹರಣೆಯಾಗಿದ್ದರು ಕೂಡ. ಈ ಆಟಗಾರರು ಸರಿಯಾಗಿ ಫೀಲ್ಡಿಂಗ್ ಕೂಡ ಮಾಡುವುದಿಲ್ಲ ಎಂಬುದು ಅಭಿಮಾನಿಗಳ ಆರೋಪ. ಹೀಗಾಗಿ ಮುಂದಿನ ಯೋಜನೆಯ ಪ್ರಕಾರ ಹಿರಿಯ ಆಟಗಾರರನ್ನು ಕೈ ಬಿಟ್ಟು ಎಲ್ಲದ್ದಕ್ಕೂ ಸಿದ್ಧವಾಗಿರುವ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿರುವ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಕೂಡ ಪರಿಣಾಮಕಾರಿ ಎನಿಸಿಕೊಂಡಿರಲಿಲ್ಲ. ಅಂತೆಯೇ ಟೀಮ್ ಇಂಡಿಯಾದಲ್ಲಿ ಎಕ್ಸ್‌ಪ್ರೆಸ್ ಬೌಲರ್ ಕೂಡ ಇರಲಿಲ್ಲ. ಇವೆಲ್ಲವೂ ತಂಡದ ಪ್ರದರ್ಶನಕ್ಕೆ ಮಾರಕವಾಗಿದ್ದವು. ಈ ಎಲ್ಲ ಅಂಶಗಳನ್ನು ಮನಗಂಡು ಯುವ ಪಡೆಯನ್ನು ಕಟ್ಟುವುದು ಬಿಸಿಸಿಐ ಉದ್ದೇಶವಾಗಿದೆ.
ಟಿ೨೦ ಮಾದರಿಯ ಕ್ರಿಕೆಟ್‌ಗೆ ಚುರುಕುತನ ಅತ್ಯಗತ್ಯ. ಪ್ರಮುಖವಾಗಿ ನಿರ್ಭಯ ಬ್ಯಾಟಿಂಗ್ ಹಾಗೂ ಬೌಲಿಂಗ್ ನಡೆಸಬೇಕು. ಜತೆಗೆ ಉತ್ತಮವಾಗಿ ಫೀಲ್ಡಿಂಗ್ ಕೂಡ ನಡೆಸಬೇಕು. ಈ ಎಲ್ಲ ಕಾರ್ಯಕ್ಕೆ ಯುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ | Virat Kohli | ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ; ಏನಿದು ನೂತನ ರೆಕಾರ್ಡ್?