ನವ ದೆಹಲಿ : 19 ವರ್ಷದೊಳಗಿನ ಭಾರತದ ವನಿತೆಯರ ತಂಡ ಉದ್ಘಾಟನಾ ಅವೃತ್ತಿಯ ಅಂಡರ್-19 ಮಹಿಳೆಯರ ಟಿ20 ವಿಶ್ವ ಕಪ್ (U19 World Cup) ಗೆದ್ದು ಸಾಧನೆ ಮಾಡಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ವಿಜಯದ ಕುರಿತು ಬಿಸಿಸಿಐ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯೆ ಕೊಟ್ಟಿರುವ ಅವರು ಯುವ ಕ್ರಿಕೆಟಿಗರ ಈ ಸಾಧನೆ ಭವಿಷ್ಯದ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿದ ಭಾರತ ತಂಡ ಟ್ರೋಫಿ ಗೆದ್ದುಕೊಂಡಿದೆ. ಇದು ಉದ್ಘಾಟನಾ ಆವೃತ್ತಿಯ ಟೂರ್ನಿಯಾಗಿರುವ ಕಾರಣ ಭಾರತ ಕ್ರಿಕೆಟ್ ಕ್ಷೇತ್ರದ ಪಾಲಿಗೆ ಇದು ಅಪೂರ್ವ ಸಾಧನೆಯಾಗಿದೆ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಹೊಗಳಿಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : U19 World Cup : ವಿಶ್ವ ಕಪ್ ಗೆದ್ದ 19 ವರ್ಷದೊಳಗಿನ ವನಿತೆಯರ ತಂಡಕ್ಕೆ 5 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ
ವಿಶ್ವ ಕಪ್ ಗೆದ್ದಿರುವ ಭಾರತ ತಂಡಕ್ಕೆ ಅಭಿನಂದನೆಗಳು. ಇದೊಂದು ವಿಶೇಷ ವಿಜಯವಾಗಿದೆ. ತಂಡದ ಸದಸ್ಯರು ಅದ್ಭುತವಾಗಿ ಆಡಿದರು ಹಾಗೂ ಅವರ ಪ್ರಯತ್ನ ಭವಿಷ್ಯದ ಕ್ರಿಕೆಟಿಗರಿಗೆ ಪ್ರೇರಣೆಯಾಗಲಿದೆ. ಭವಿಷ್ಯದ ಅವರ ಪಯತ್ನಗಳಿಗೆ ಶುಭಾಶಗಳು ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.