ನವದೆಹಲಿ: ಕೌಂಟಿ ಕ್ರಿಕೆಟ್(county cricket) ಆಡುತ್ತಿದ್ದ ವೇಳೆ ಮೊಣಕಾಲು ಗಾಯಕ್ಕೆ(knee injury) ತುತ್ತಾಗಿದ್ದ ಭಾರತದ ಯುವ ಬ್ಯಾಟರ್ ಪೃಥ್ವಿ ಶಾ(Prithvi Shaw ) ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ 3-4 ತಿಂಗಳು ಬೇಕಾಗಬಹುದು ಎಂದು ತಿಳಿದುಬಂದಿದೆ. ಹೀಗಾಗಿ ಅವರು ಅಕ್ಟೋಬರ್ನಲ್ಲಿ ಆರಂಭವಾಗಲಿರುವ ದೇಶೀಯ ಕ್ರಿಕೆಟ್ ಟೂರ್ನಿ ಇರಾನಿ ಕಪ್ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಫ್ಟನ್‌ಶೈರ್ ಪರ ಲಿಸ್ಟ್ ‘ಎ’ ಪಂದ್ಯಗಳನ್ನು ಆಡುತ್ತಿದ್ದ ಪೃಥ್ವಿ ಶಾ ದಾಖಲೆಯ ದ್ವಿಶತಕ ಮತ್ತು ಶತಕ ಸಿಡಿಸಿ ಟೀಮ್ ಇಂಡಿಯಾಕ್ಕೆ ಮತ್ತೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ ಅವರಿಗೆ ಲಂಡನ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅವರ ಮೇಲೆ ಬಿಸಿಸಿಐ(BCCI) ವೈದ್ಯಕೀಯ ತಂಡ ನಿಗಾ ಇಟ್ಟಿದ್ದು, ಸಂಪೂರ್ಣ ಚೇತರಿಕೆಗೆ ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.
ಗಾಯದ ಮಧ್ಯೆಯೂ ಶತಕ ಬಾರಿಸಿದ್ದರು
ಫೀಲ್ಡಿಂಗ್ ವೇಳೆ ಗಾಯಗೊಂಡರೂ ಛಲ ಬಿಡದ ಪೃಥ್ವಿ ಬ್ಯಾಟಿಂಗ್ ನಡೆಸಿದ್ದರು. ವಿಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಡರ್ಹಾಮ್ ನೀಡಿದ್ದ 199 ರನ್ ಗುರಿ ಬೆನ್ನಟುವ ವೇಳೆ 76 ಎಸೆತಗಳಲ್ಲಿ ಬರೋಬ್ಬರಿ 7 ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 125 ರನ್ ಸಿಡಿಸಿದ್ದರು. ಆಗಸ್ಟ್ 13 ರಂದು ಈ ಪಂದ್ಯ ನಡೆದಿತ್ತು.
ಕೌಂಟಿಯಲ್ಲಿ ವಿಶ್ವ ದಾಖಲೆ ಬರೆದಿದ್ದ ಪೃಥ್ವಿ ಶಾ
ಡರ್ಹಾಮ್ ವಿರುದ್ಧದ ಮೊದಲ ಪಂದ್ಯದಲ್ಲಿ ಪೃಥ್ವಿ ಶಾ ಅವರು ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 153 ಎಸೆತಗಳಿಂದ 244 ರನ್ ಬಾರಿಸಿದ್ದರು. ಈ ಮೂಲಕ ಕೌಂಟಿ ಇತಿಹಾಸದಲ್ಲಿ ದ್ವಿಶತಕ(Prithvi Shaw hits double hundred) ಸಿಡಿಸಿದ ಕೇವಲ ಮೂರನೇ ಕ್ರಿಕೆಟಿಗ ಮತ್ತು ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಜತೆಗೆ ಕೌಂಟಿಯಲ್ಲಿ ವೈಯಕ್ತಿಕ ಅತ್ಯಧಿಕ ಮೊತ್ತ ಪೇರಿಸಿದ ಒಲಿ ರಾಬಿನ್ಸನ್(ollie robinson) ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಅಳಿಸಿ ಹಾಕಿದ್ದರು. ರಾಬಿನ್ಸನ್ 206 ರನ್ ಬಾರಿಸಿದ್ದರು. ಪೃಥ್ವಿ ಶಾ 244 ರನ್ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದರು.
ಇದನ್ನೂ ಓದಿ Prithvi Shaw: ಆಯ್ಕೆ ಸಮಿತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ; ಪೃಥ್ವಿ ಶಾ
ಟೀಮ್ ಇಂಡಿಯಾದಿಂದ ದೂರ
2018ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿರುವ ಅವರು 2021ರ ಜುಲೈನಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದರು.
ಸಪ್ನಾ ಗಿಲ್ಗೆ ಕಿರುಕುಳ ಪ್ರಕರಣದಲ್ಲಿ ನಿರಾಳ
ಇದೇ ವರ್ಷಾರಂಭದಲ್ಲಿ ಮುಂಬಯಿಯ ಉಪನಗರ ಹೋಟೆಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್(Sapna Gill) ಮತ್ತು ಅವರ ಸ್ನೇಹಿತರು ಪೃಥ್ವಿ ಶಾ ಕಾರಿನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಅವರ ಬಂಧನವಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಶಾ ನಿರಾಳರಾಗಿದ್ದರು.