ಲಂಡನ್: ಇಂಗ್ಲೆಂಡ್ನ ಲಿಸ್ಟ್ ಎ ಕ್ರಿಕೆಟ್, ಕೌಂಟಿಯಲ್ಲಿ(county cricket 2023) ಸ್ಫೋಟಕ ಬ್ಯಾಟಿಂಗ್ ಮೂಲಕ ದ್ವಿಶತಕ ಸಿಡಿಸಿದ ಪೃಥ್ವಿ ಶಾ(Prithvi Shaw), ತಾನು ರಾಷ್ಟ್ರೀಯ ತಂಡದ ಭವಿಷ್ಯದ ಕುರಿತಾಗಿ ಸದ್ಯಕ್ಕೆ ಯೋಚಿಸುತ್ತಿಲ್ಲ. ಕೌಂಟಿ ಕ್ರಿಕೆಟ್ನಲ್ಲಿ ಹೆಚ್ಚಿನ ಅವಧಿಯನ್ನು ಆನಂದಿಸಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಪೃಥ್ವಿ ಶಾ ಅವರು ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 153 ಎಸೆತಗಳಿಂದ 244 ರನ್ ಬಾರಿಸಿದ್ದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 28 ಬೌಂಡರಿ ಮತ್ತು 11 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ(Prithvi Shaw hits double hundred) ಸಿಡಿಸಿದ ಕೇವಲ ಮೂರನೇ ಕ್ರಿಕೆಟಿಗ ಮತ್ತು ಮಪದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಕೌಂಟಿಯಲ್ಲಿ ವೈಯಕ್ತಿಕ ಅತ್ಯಧಿಕ ಮೊತ್ತ ಪೇರಿಸಿದ ಒಲಿ ರಾಬಿನ್ಸನ್(ollie robinson) ಹೆಸರಿನಲ್ಲಿದ್ದ ದಾಖಲೆyನ್ನು ಕೂಡ ಅಳಿಸಿ ಹಾಕಿದ್ದರು. ರಾಬಿನ್ಸನ್ 206 ರನ್ ಬಾರಿಸಿದ್ದರು. ಪೃಥ್ವಿ ಶಾ 244 ರನ್ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದರು.
ಆಯ್ಕೆ ಸಮಿತಿಗೆ ಪರೋಕ್ಷವಾಗಿ ಕುಟುಕಿದ ಶಾ
ಈ ಸ್ಫೋಟಕ ಇನಿಂಗ್ಸ್ ಬಳಿಕ ಮಾತನಾಡಿದ 23ರ ಹರೆಯದ ಪ್ರತಿಭಾವಂತ ಬ್ಯಾಟರ್ ಪೃಥ್ವಿ ಶಾ, ‘ನಾನು ಇಲ್ಲಿಗೆ ಅನುಭವ ಪಡೆಯಲು ಬಂದಿರುವೆ. ಭಾರತದ ಆಯ್ಕೆಗಾರರು ಏನು ಯೋಚಿಸುತ್ತಿದ್ದಾರೆಂಬ ಕುರಿತು ನಾನು ಚಿಂತಿಸುತ್ತಿಲ್ಲ. ನಾನಿಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿದ್ದೇನೆ. ನಾಟಿಂಗ್ಹ್ಯಾಮ್ಶೇರ್ ನನಗೆ ಈ ಉತ್ತಮ ಅವಕಾಶ ನೀಡಿದೆ’ ಎಂದು ಹೇಳುವ ಮೂಲಕ ಆಯ್ಕೆ ಸಮಿತಿಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಐಪಿಎಲ್ನಲ್ಲಿ ಶೂನ್ಯ ಸಾಧನೆ
ಈ ಬಾರಿಯ ಐಪಿಎಲ್ನಲ್ಲಿ ಸತತ ಶೂನ್ಯ ಸಾಧನೆ ಮಾಡಿದ ಪೃಥ್ವಿ ಶಾ ವಿರುದ್ಧ ಅನೇಕ ಟೀಕೆಗಳು ವ್ಯಕ್ತವಾಗಿದ್ದವು. ಅವರ ಕ್ರಿಕೆಟ್ ಬಾಳ್ವೆ ಮುಗಿಯಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಪೃಥ್ವಿ ಶಾ ಅವರು ಕೌಂಟಿ ಕ್ರಿಕೆಟ್ ಆಡಲು ಮುಂದಾದ್ದು. ಈ ವೇಳೆಯೂ ಅನೇಕರು ಅವರನ್ನು ವ್ಯಂಗ್ಯವಾಡಿದ್ದರು. ಮತ್ತೊಂದು ಸುತ್ತಿನ ಶೂನ್ಯ ಸಂಪಾದನೆಗೆ ಇಂಗ್ಲೆಂಡ್ಗೆ ತೆರಳಿದ್ದಾರೆ ಎಂದಿ ಕಮೆಂಟ್ ಮಾಡಿದ್ದರು.
ಇದನ್ನೂ ಓದಿ Prithvi Shaw: ಕೌಂಟಿ ಕ್ರಿಕೆಟ್ನಲ್ಲಿ ವಿಸ್ಫೋಟಕ ದ್ವಿಶತಕ ಬಾರಿಸಿದ ಪೃಥ್ವಿ ಶಾ; ಆಂಗ್ಲರ ಹಲವು ದಾಖಲೆ ಪತನ
ಎರಡು ವರ್ಷಗಳಿಂದ ತಂಡದಿಂದ ದೂರ
2018ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿರುವ ಅವರು 2021ರ ಜುಲೈನಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದರು.
ಡೋಪಿಂಗ್ನಲ್ಲಿ ಸಿಕ್ಕಿ ಬಿದ್ದ ಪೃಥ್ವಿ ಶಾ
2019ರಲ್ಲಿ ನಿಷೇಧಿತ ದ್ರವ್ಯ ಸೇವನೆ ಆರೋಪ ದೃಢಪಟ್ಟ ಹಿನ್ನಲೆ 8 ತಿಂಗಳ ಕಾಲ ನಿಷೇಧ ಶಿಕ್ಷೆಗೂ ಪೃಥ್ವಿ ಶಾ ಒಳಗಾಗಿದ್ದರು. ನಿಷೇಧಿತ ಟರ್‌ಬ್ಯುಟಲೈನ್ ಸೇವನೆ ಮಾಡಿದ ಹಿನ್ನೆಲೆಯಲ್ಲಿ ನಿಷೇಧಕ್ಕೊಳಪಟ್ಟಿದ್ದರು. ಕೆಮ್ಮು ಮತ್ತು ನೆಗಡಿಗೆ ಸೇವಿಸಿದ್ದ ಔಷಧದಲ್ಲಿ ನಿಷೇಧಿತ ಟರ್‌ಬ್ಯುಟಲೈನ್ ಅಂಶ ಒಳಗೊಂಡಿತ್ತು.