ಲಂಡನ್: ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಭಾರತ ತಂಡದದಿಂದ ಹೊರಗುಳಿದಿರುವ ಪೃಥ್ವಿ ಶಾ(Prithvi Shaw) ಅವರು ಕೌಂಟಿ(county cricket 2023) ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಈ ಮೂಲಕ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡು ಮತ್ತೆ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡುವ ಆತ್ಮವಿಶ್ವಾಸದಲ್ಲಿದ್ದಾರೆ.
ಪೃಥ್ವಿ ಶಾ ಅವರು ಲಂಡನ್ ತಲುಪಿದ್ದು ಇದೇ ಮೊದಲ ಸಲ ಅವರು ಕೌಂಟಿ ಕ್ರಿಕೆಟ್ನಲ್ಲಿ ಆಡಲು ಸಜ್ಜಾಗಿದ್ದಾರೆ. ನಾರ್ತಾಂಪ್ಟನ್‌ಶೈರ್ ಕೌಂಟಿ ತಂಡವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಈ ಟೂರ್ನಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು ಮೊದಲ ಪಂದ್ಯದಲ್ಲೇ ಶಾ ಕಣಕ್ಕಿಳಿಯಲಿದ್ದಾರೆ ಎಂದು ನಾರ್ತಾಂಪ್ಟನ್‌ಶೈರ್‌ನ(Northamptonshire ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇ ಪೇನ್ ಹೇಳಿದ್ದಾರೆ.
ಈ ಬಾರಿ ನಡೆದ 16ನೇ ಆವೃತ್ತಿಯ ಐಪಿಎಲ್ನಲ್ಲಿ ಪೃಥ್ವಿ ಶಾ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಮೂರು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದರು. ಬಳಿಕ ಇಂಪೆಕ್ಟ್ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಂಡರೂ ತಮ್ಮ ಬ್ಯಾಟಿಂಗ್ ವೈಫಲ್ಯ ಮಾತ್ರ ಮುಂದುವರಿದಿತ್ತು. ಇದೀಗ ತಮ್ಮ ಹಿಂದಿನ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ಅವರು ಕೌಂಟಿ ಆಡಲು ನಿರ್ಧರಿಸಿದ್ದಾರೆ. ಇಲ್ಲಿ ಶ್ರೇಷ್ಠ ಪ್ರದರ್ಶನ ತೋರಿದರೆ ಆಯ್ಕೆ ಸಮಿತಿಮ ಗಮನಸೆಳೆಯುವುದು ಅವರ ಪ್ರಮುಖ ಯೋಜನೆಯಾಗಿದೆ.
ಇದನ್ನೂ ಓದಿ Prithvi Shaw : ಯೂಟ್ಯೂಬರ್ ಸಪ್ನಾ ಗಿಲ್ಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಪೃಥ್ವಿ ಶಾ ನಿರಾಳ
ಸಪ್ನಾ ಗಿಲ್ಗೆ ಕಿರುಕುಳ ಪ್ರಕರಣದಲ್ಲಿ ನಿರಾಳ
ಇದೇ ವರ್ಷಾರಂಭದಲ್ಲಿ ಮುಂಬಯಿಯ ಉಪನಗರ ಹೋಟೆಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ಮತ್ತು ಅವರ ಸ್ನೇಹಿತರು ಪೃಥ್ವಿ ಶಾ ಕಾರಿನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಅವರ ಬಂಧನವಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಶಾ ನಿರಾಳರಾಗಿದ್ದರು.
ಫೆಬ್ರವರಿಯಲ್ಲಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಸಪ್ನಾ ಗಿಲ್ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ನೀಡಿದ್ದರು.