ನವ ದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ದೆಹಲಿಯ ಜಂತರ್ಮಂತರ್ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ (Wrestlers Protest) ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಾಥ್ ನೀಡಿದರು. ಜಂತರ್ಮಂತರ್ಗೆ ತೆರಳಿ, ಪ್ರತಿಭಟನಾಕಾರರನ್ನು ಭೇಟಿಯಾದ ಅವರು ‘ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಭರವಸೆ ಕೊಟ್ಟಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ವಾಪಸ್ ದೆಹಲಿಗೆ ತೆರಳುತ್ತಿದ್ದಂತೇ ಜಂತರ್ಮಂತರ್ಗೆ ಹೋಗಿದ್ದಾರೆ. ಅಲ್ಲಿ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಟ್ ಮತ್ತಿತರ ಜತೆ ಕುಳಿತು ಮಾತುಕತೆ ನಡೆಸಿದ್ದಾರೆ. ಈ ವಿಡಿಯೊವನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ಕುಸ್ತಿಪಟುಗಳನ್ನು ಭೇಟಿ ಮಾಡುವುದಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಟ್ವೀಟ್ ಮಾಡಿದ್ದರು. ‘ಪಕ್ಷವೊಂದರ ಮತ್ತು ಅದರ ನಾಯಕರ ದುರಹಂಕಾರವು ನಮ್ಮ ದೇಶಕ್ಕೇ ಹೆಮ್ಮೆ ತಂದುಕೊಂಡುವವರ ಧ್ವನಿಗಳನ್ನು ಹತ್ತಿಕ್ಕುತ್ತಿದೆ. ತಮ್ಮ ಗೆಲುವಿನ ಮೂಲಕ ದೇಶವನ್ನು ಗೆಲ್ಲಿಸುವ ಕ್ರೀಡಾಪಟುಗಳನ್ನು ಸದಾ ಗೌರವಯುತವಾಗಿ ನಡೆಸಿಕೊಳ್ಳಬೇಕು. ಅದರಲ್ಲೂ ಮಹಿಳಾ ಆಟಗಾರರ ಗೆಲುವು, ಎಲ್ಲಕ್ಕಿಂತಲೂ ಮಿಗಿಲು. ಆದರೆ ಇಂದು ಅವರು ಸಂಸತ್ತಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಕಣ್ಣೀರು ಇಡುತ್ತ ಕುಳಿತಿದ್ದಾರೆ. ಅವರು ದೀರ್ಘಕಾಲದಿಂದಲೂ ತಮಗೆ ಆದ ಅನ್ಯಾಯದ ಬಗ್ಗೆ ದೂರು ಕೊಡುತ್ತಿದ್ದರೂ, ಅದನ್ನು ಕೇಳುವವರು ಯಾರೂ ಇಲ್ಲ. ನಾವು ಈ ಸಹೋದರಿಯರ ಬೆಂಬಲಕ್ಕೆ ನಿಲ್ಲೋಣ. ಇದು ದೇಶದ ಗೌರವದ ವಿಚಾರ. ನಿಮ್ಮ ದೂರನ್ನು ಆಲಿಸುತ್ತೇವೆ, ವಿಚಾರಣೆ ನಡೆಸುತ್ತೇವೆ ಎಂದು ಸರ್ಕಾರ ಹೇಳಿದಾಗ ದೃಢವಾದ ತೋಳಿನ, ಆದರೆ ಮುಗ್ಧ ಮನಸಿರುವ ಈ ಹುಡುಗಿಯರು ನಂಬಿಕೊಂಡಿದ್ದರು. ಆದರೆ ತನಿಖೆ ಆಗಲೇ ಇಲ್ಲ. ಇನ್ನು ಶಿಕ್ಷೆಯ ಮಾತು ಎಲ್ಲಿ? ಕೇಂದ್ರ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದೆಯೇ?’ ಎಂದು ಪ್ರಶ್ನಿಸಿದ್ದರು.
ಕರೆಂಟ್, ನೀರು ಕಟ್!
ಕುಸ್ತಿಪಟುಗಳ ನಿರಂತರ ಪ್ರತಿಭಟನೆ ಬೆನ್ನಲ್ಲೇ ಶುಕ್ರವಾರ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್ಐಆರ್ ದಾಖಲು ಮಾಡಿದ್ದಾರೆ. ಆದರೆ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಪ್ರತಿಭಟನಾ ಸ್ಥಳದಲ್ಲಿ ನೀರು ಮತ್ತು ವಿದ್ಯುತ್ ವ್ಯವಸ್ಥೆ ಕಡಿತಗೊಂಡಿದೆ ಎಂದು ಒಲಿಂಪಿಕ್ ಮೆಡಲಿಸ್ಟ್ ಬಜರಂಗ್ ಪುನಿಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಕತ್ತಲಲ್ಲೇ ವಿಡಿಯೊ ಮಾಡಿ, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ ಬಜರಂಗ್ ಪುನಿಯಾ, ‘ಜಂತರ್ಮಂತರ್ಗೆ ಆಹಾರ, ನೀರು, ವಿದ್ಯುತ್ ವ್ಯವಸ್ಥೆಯನ್ನು ದೆಹಲಿ ಪೊಲೀಸರು ಕಡಿತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
‘ಜಂತರ್ಮಂತರ್ನಲ್ಲಿ ಯಾವ ಕಾರಣಕ್ಕೂ ನೀರು-ಆಹಾರ ಕೊಡುವುದಿಲ್ಲ ಎಂದು ಎಸಿಪಿ ಹೇಳಿದ್ದಾರೆ. ನೀವು ಪ್ರತಿಭಟನೆ ಮಾಡಬೇಕು ಎಂದರೆ ರಸ್ತೆಮೇಲೆ ಮಲಗಿ ಎಂದು ನಮಗೆ ಪೊಲೀಸರು ಹೇಳುತ್ತಾರೆ. ಸುಪ್ರೀಂಕೋರ್ಟ್ ಯಾವಾಗ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆಯೋ, ಅಂದಿನಿಂದಲೂ ಅವರು ನಮ್ಮ ಮೇಲೆ ಜಾಸ್ತಿ ಒತ್ತಡ ಹಾಕುತ್ತಿದ್ದಾರೆ’ ಎಂದೂ ಬಜರಂಗ್ ತಿಳಿಸಿದ್ದಾರೆ.