Site icon Vistara News

Pro Kabaddi: ಎರಡು ವರ್ಷಗಳ ಬಳಿಕ ಹಳೆ ಮಾದರಿಗೆ ಮರಳಿದ ಪ್ರೊ ಕಬಡ್ಡಿ ಲೀಗ್

pro kabaddi team captains standing in front of trophy

ಬೆಂಗಳೂರು: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi)ನ ಆಟಗಾರರ ಹರಾಜು ಪ್ರಕ್ರಿಯೆಯ(pro kabaddi league 2023 auction date) ದಿನಾಂಕ ಕಳೆದ ತಿಂಗಳು ಪ್ರಕಟಗೊಂಡಿತ್ತು. ಇದೀಗ ಈ ಮಹತ್ವದ ಟೂರ್ನಿಯ ದಿನಾಂಕ ಪ್ರಕಟಗೊಂಡಿದೆ. ಡಿಸೆಂಬರ್​ 2ರಂದು ಆರಂಭವಾಗಲಿದೆ. ಮಶಾಲ್‌ ಸ್ಪೋರ್ಟ್ಸ್​ನ(Mashal Sports) ಮುಖ್ಯಸ್ಥ ಮತ್ತು ಪಿಕೆಎಲ್‌ನ ಲೀಗ್‌ ಕಮಿಷನರ್‌ ಆಗಿರುವ ಅನುಪಮ್‌ ಗೋಸ್ವಾಮಿ(Anupam Goswami) ಅವರು ಈ ದಿನಾಂಕವನ್ನು ಪ್ರಕಟಿಸಿದ್ದಾರೆ.

ಹಳೆಯ ಮಾದರಿಯಲ್ಲಿ ಟೂರ್ನಿ

10ನೇ ಆವೃತ್ತಿಯ ಈ ಲೀಗ್​ ಎರಡು ವರ್ಷಗಳ ಬಳಿಕ ಮತ್ತೆ ಹಳೆಯ “ಕ್ಯಾರವಾನ್‌ ಮಾದರಿ’ಗೆ(carvan format) ಮರಳಿದೆ. ಎಲ್ಲ 12 ಫ್ರಾಂಚೈಸಿಗಳ ತವರು ಕೇಂದ್ರಗಳಲ್ಲಿ ಪಂದ್ಯಗಳನ್ನು ಆಡಲಾಗುವುದು. ಇದರಿಂದ ತವರಿನ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೊರೊನಾ ಕಾರಣದಿಂದ 8ನೇ ಪ್ರೊ ಕಬಡ್ಡಿ ಪಂದ್ಯಾವಳಿ ಸಂಪೂರ್ಣವಾಗಿ ಬೆಂಗಳೂರಿನ “ಬಯೋ ಬಬಲ್‌’ ಸುರಕ್ಷೆಯಲ್ಲಿ ನಡೆದಿತ್ತು. 9ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಗಳನ್ನು ಬೆಂಗಳೂರು, ಪುಣೆ, ಹೈದರಾಬಾದ್‌ ಮತ್ತು ಮುಂಬಯಿಯಲ್ಲಿ ಆಡಲಾಗಿತ್ತು. ಈ ಬಾರಿ ಎಲ್ಲ ತಂಡಗಳ ತವರಿನಲ್ಲಿಯೂ ನಡೆಯಲಿದೆ.

ಮುಂದಿನ ತಿಂಗಳು ಹರಾಜು

ಸೆಪ್ಟಂಬರ್​ 8 ಮತ್ತು 9ರಂದು ಮುಂಬಯಿಯಲ್ಲಿ ಪ್ರೊ ಕಬಡ್ಡಿ ಆಟಗಾರರ ಹರಾಜು ನಡೆಯಲಿದೆ. ಸುಮಾರು 500 ಆಟಗಾರರ ಹೆಸರು ಇದರಲ್ಲಿ ಗೋಚರಿಸುವ ಸಾಧ್ಯತೆ ಇದೆ. ಪ್ರತೀ ಫ್ರಾಂಚೈಸಿಗಳಿಗೆ 7 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಒಟ್ಟಾರೆ ಇರುವ 12 ತಂಡಗಳು ಮೂರು ವಿಭಾಗಗಳಲ್ಲಿ ಒಟ್ಟು 84 ಆಟಗಾರರನ್ನು ಉಳಿಸಿಕೊಂಡಿವೆ. ಸ್ಟಾರ್​ ಆಟಗಾರ ಪವನ್ ಸೆಹ್ರಾವತ್(pawan sehrawat) ಮತ್ತು ವಿಕಾಸ್ ಕಂಡೋಲಾ ದೊಡ್ಡ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ಪವನ್ ಸೆಹ್ರಾವತ್ ಅವರು ಮತ್ತೆ ಬೆಂಗಳೂರು ಬುಲ್ಸ್(bengaluru bulls)​ ತಂಡ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಬಾರಿಯ ಹರಾಜಿನಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ -2023ರ ಫೈನಲಿಸ್ಟ್‌ ತಂಡಗಳ 24 ಆಟಗಾರರಿಗೆ ಅವಕಾಶ ನೀಡಲಾಗುವುದು. ಹೀಗಾಗಿ ಹೊಸಮುಖಗಳ ದರ್ಶನವಾಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ Pro Kabaddi: ಮತ್ತೆ ಬೆಂಗಳೂರು ಬುಲ್ಸ್​ ಸೇರಲಿದ್ದಾರೆ ಪವನ್ ಸೆಹ್ರಾವತ್​!

ದುಬಾರಿ ಆಟಗಾರ

ಬೆಂಗಳೂರು ಬುಲ್ಸ್​ ತಂಡದಲ್ಲಿದ್ದ ಪವನ್​ ಸೆಹ್ರಾವತ್ ಅವರನ್ನು​ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ತಮಿಳ್ ತಲೈವಾಸ್ ಫ್ರಾಂಚೈಸಿಯು ಬರೋಬ್ಬರಿ 2.23 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಮೂಲಕ ಪವನ್ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಗುಜರಾತ್ ಜೈಂಟ್ಸ್ ಎದುರಿನ ಮೊದಲ ಪಂದ್ಯದಲ್ಲಿಯೇ ಎದುರಾಳಿ ತಂಡದ ಚಂದ್ರನ್​ ರಂಜಿತ್​ ಅವರನ್ನು ಟ್ಯಾಕಲ್​ ಮಾಡುವ ಬರದಲ್ಲಿ ಗಾಯಕ್ಕೆ ತುತ್ತಾಗಿ ಕೂಟದಿಂದ ಹೊರಬಿದ್ದಿದ್ದರು. 10ನೇ ಆವೃತ್ತಿಗೆ ರಿಟೈಟ್​ ಮಾಡದ ಕಾರಣ ಅವರು ಕೂಡ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಮತ್ತೆ ಬುಲ್ಸ್​ ತಂಡಕ್ಕೆ ಸೇರ್ಪಡೆಗೊಳಿಸುವ ಎಲ್ಲ ಪ್ರಯತ್ನವನ್ನು ತಂಡದ ಕೋಚ್​ ರಣಧೀರ್ ಸಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Exit mobile version