Site icon Vistara News

Pro Kabaddi: ಸತತ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್​

bengaluru bulls vs haryana steelers

ಬೆಂಗಳೂರು: ಹ್ಯಾಟ್ರಿಕ್​ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್(bengaluru bulls)​ ಮತ್ತೆ ಸೋಲು ಕಂಡಿದೆ. ಶನಿವಾರ ತವರಿನಲ್ಲಿ ನಡೆದ ಹರ್ಯಾಣ ಸ್ಟೀಲರ್(haryana steelers) ಎದುರಿನ ಪಂದ್ಯದಲ್ಲಿ 38-32 ಅಂತರದ ಸೋಲಿಗೆ ತುತ್ತಾಯಿತು. ಇದು ಬುಲ್ಸ್​ಗೆ ಎದುರಾದ ಸತತ ನಾಲ್ಕನೇ ಸೋಲಾಗಿದೆ. ಕಳೆದ ಪಂದ್ಯದಲ್ಲಿ ಡಿಫೆಂಡಿಂಗ್​ ವಿಭಾಗದಲ್ಲಿ ಮಾಡಿದ ತಪ್ಪುಗಳನ್ನೇ ಈ ಪಂದ್ಯದಲ್ಲಿಯೂ ಪುನರಾವರ್ತಿಸಿದ್ದು ಸೋಲಿಗೆ ಪ್ರಮುಖ ಕಾರಣ.

ಶನಿವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್​ನ ಈ ಪಂದ್ಯದಲ್ಲಿ ಆರಂಭದಲ್ಲಿ ಘರ್ಜಿಸಿದ ಗೂಳಿಗಳು ಬಳಿಕ ಪಂದ್ಯ ಸಾಗುತ್ತಲೇ ಹೋದಂತೆ ತಮ್ಮ ಆರ್ಭಟವನ್ನು ಕಡಿಮೆ ಮಾಡಿದರು. 5-0 ಮುನ್ನಡೆ ಕಾಯ್ದುಕೊಂಡು ಉತ್ತಮ ಮುನ್ನಡೆ ಗಳಿಸಿದ ಬುಲ್ಸ್ ಆಟಗಾರರು​ ಬಳಿಕ ಹಲವು ತಪ್ಪುಗಳಿಂದ ಎದುರಾಳಿ ತಂಡಕ್ಕೆ ಸತತವಾಗಿ ಅಂಕವನ್ನು ನೀಡುತ್ತಲೇ ಹೋದರು. ಆದರೆ ಬುಲ್ಸ್​ನ ಭರತ್​ ಕುಮಾರ್​ ಮಾತ್ರ ಶಕ್ತಿ ಮೀರಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು.

ಭರತ್​ ಏಕಾಂಗಿ ಹೋರಾಟ

ಎದುರಾಳಿ ಕೋಟೆಗೆ ನುಗ್ಗಿ ಅಂಕಗಳನ್ನು ಕದಿಯುತ್ತಲೇ ಇದ್ದರು. ಆದರೆ ಡಿಫೆಂಡಿಂಗ್​ ವಿಭಾಗದಲ್ಲಿ ಉತ್ತಮ ಬೆಂಬಲ ಸಿಗದ ಕಾರಣ ಅವರು ಎಷ್ಟೇ ಅಂಕ ಗಳಿಸುತ್ತಾ ಹೋದರೂ ಇದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಹರ್ಯಾಣ ಸ್ಟೀಲರ್ ಮುನ್ನಡೆ ಕಾಯ್ದುಕೊಂಡೇ ಸಾಗಿತು. ಸೂಪರ್​ 10 ಸಾಧಿಸಿದ ಭರತ್​ ಅವರು 26 ರೇಡಿಂಗ್​ ನಡೆಸಿ 14 ಅಂಕ ಕಲೆ ಹಾಕಿದರು. ಇದರಲ್ಲಿ 11 ಟಚ್​ ಮತ್ತು ಮೂರು ಬೋನಸ್​ ಅಂಕ ಒಳಗೊಂಡಿತು. ವಿಕಾಸ್​ ಕಂಡೋಲ ಅವರು ಕೇವಲ ಒಂದು ರೇಡ್​ ಮಾಡಿ ಬಳಿಕ ಪಂದ್ಯದಿಂದ ಹೊರಗುಳಿದರು. ಡಿಫಂಡರ್​ ಸುರ್ಜಿತ್​ ಸಿಂಗ್​ 5 ಅಂಕ ಗಳಿಸಿದರೂ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗಲಿಲ್ಲ.

ಇದನ್ನೂ ಓದಿ Arjun Chakravarthy: ಕಬಡ್ಡಿ ಕಲಿ ’ಅರ್ಜುನ್ ಚಕ್ರವರ್ತಿ’ ಜೀವನಾಧಾರಿತ ಸಿನಿಮಾ ಫಸ್ಟ್ ಲುಕ್ ಔಟ್

ಸರ್ವಾಂಗೀಣ ಪ್ರದರ್ಶನ ತೋರಿದ ಹರ್ಯಾಣ ಸ್ಟೀಲರ್

ರೇಡಿಂಗ್​ ಮತ್ತು ಟ್ಯಾಕಲ್​ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಹರ್ಯಾಣ ಸ್ಟೀಲರ್ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಬಾಹುಬಲಿ ಖ್ಯಾತಿ ರೇಡರ್​ ಸಿದ್ದಾರ್ಥ್​ ದಸಾಯಿ ಈ ಪಂದ್ಯದಲ್ಲಿ ತಮ್ಮ ಹಳೇಯ ಫಾರ್ಮ್​ ಕಂಡುಕೊಂಡರು. ಒಟ್ಟು 13 ರೇಡ್​ ನಡೆಸಿ 7 ಅಂಕ ಗಳಿಸಿದರು. ಮತೋಬ್ಬ ರೇಡರ್​ ವಿನಯ್​ 8 ಅಂಕ ಕಲಹಾಕಿದರು. ಉಳಿದಂತೆ ಜೈದೀಪ್​(6), ಮೋಹಿತ್​(5) ಮತ್ತು ರಾಹುಲ್​(2) ಅಂಕ ಗಳಿಸಿ ತಂಡಕ್ಕೆ ನೆರವು ನೀಡಿದರು.

ಬುಲ್ಸ್​ಗೆ ಬೆಂಬಲಿಸಿದ ಸುದೀಪ್​

ನಟ ಕಿಚ್ಚ ಸುದೀಪ್​ ಅವರು ಬೆಂಗಳೂರು ಬುಲ್ಸ್​ ತಂಡಕ್ಕೆ ಮತ್ತೆ ಬೆಂಬಲ ಸೂಚಿಸಿದ್ದರು. ನಮ್ಮ ಊರು, ನಮ್ಮ ತಂಡ ಕ್ರೀಡಾಂಗಣಕ್ಕೆ ಬಂದು ಬೆಂಗಳೂರು ಬುಲ್ಸ್ ತಂಡದ ಆಟಗಾರರನ್ನು ಪ್ರೋತ್ಸಾಹಿಸಿ. ಎಂದು ವಿಡಿಯೊ ಮೂಲಕ ಮನವಿ ಮಾಡಿದ್ದರು.

Exit mobile version