Site icon Vistara News

Pro Kabaddi: ಟೈಟಾನ್ಸ್​ ಮುಳುಗಿಸಿ ಗೆಲುವಿನ ಹಳಿ ಏರಿದ ಬುಲ್ಸ್​

bengaluru bulls

ಚೆನ್ನೈ: ಸುರ್ಜಿತ್​ ಸಿಂಗ್​ ಅವರ ಸೂಪರ್​ 5 ಟ್ಯಾಕಲ್​​ ಸಾಹಸದಿಂದ ಬೆಂಗಳೂರು ಬುಲ್ಸ್​(Bengaluru Bulls) ಗೆಲುವಿನ ಹಳಿಗೆ ಮರಳಿದೆ. ತೆಲುಗು ಟೈಟಾನ್ಸ್(Telugu Titans)​​ ವಿರುದ್ಧ 33-31 ಅಂಕಗಳ ಅಂತರದ ಗೆಲುವು ಸಾಧಿಸಿದೆ. ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ(U Mumba) ತಂಡ 39-37 ಅಂಕಗಳಿಂದ ಬಲಿಷ್ಠ ಬೆಂಗಾಲ್​ ವಾರಿಯರ್ಸ್(Bengal Warriors)​ ತಂಡವನ್ನು ಮಗುಚಿ ಹಾಕಿತು. ಈ ಪಂದ್ಯ ಕೊನೆಯ ಕ್ಷಣದ ವರೆಗೂ ಅತ್ಯಂತ ಕೂತೂಹಲ ಕೆರಳಿಸಿತ್ತು.

ಚೆನ್ನೈ ಚರಣದ ಭಾನುವಾರದ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿದ ಕನ್ನಡಿಗರ ನೆಚ್ಚಿನ ತಂಡ ಬಂಗಳೂರು ಬುಲ್ಸ್​ ಆರಂಭಿಕ ಮೂರು ನಿಮಿಷದ ಆಟದಲ್ಲಿ ಕಳಪೆ ಪ್ರದರ್ಶನ ತೋರಿತು. ಸರಿಯಾದ ಆಟದ ಸಂಯೋಜನೆಯ ಕೊರತೆಯಿಂದ ಅಂಕವನ್ನು ಬಿಟ್ಟುಕೊಟ್ಟಿತು. ಭರತ್​ ಅವರು ಒಂದೇ ರೈಡ್​ನಲ್ಲಿ 2 ಅಂಕ ಗಳಿಸುವ ಮೂಲಕ ತಂಡದ ಖಾತೆ ತೆರೆದರು. ಇಲ್ಲಿಂದ ಬುಲ್ಸ್​ ಘರ್ಜನೆ ಜೋರಾಗಿ ಸಾಗಿತು.

ಇದನ್ನೂ ಓದಿ Pro Kabaddi: ಪುಣೇರಿ ಪಲ್ಟನ್ ಎದುರು ಅಬ್ಬರಿಸದ ಬುಲ್ಸ್; ಹೀನಾಯ ಸೋಲು

ಮೊದಲ ಟ್ಯಾಕಲ್​ ಪ್ರಯತ್ನದಲ್ಲಿ ಎಡವಿದ ಸುರ್ಜಿತ್​ ಸಿಂಗ್​ ಆ ಬಳಿಕದ ಟ್ಯಾಕಲ್​ಗಳನ್ನು ಯಶಸ್ವಿಯಾಗಿ ಮಾಡುವ ಮೂಲಕ ಬರೋಬ್ಬರಿ 7 ಅಂಕ ಕಲೆಹಾಕಿದರು. ಅವರ ರಕ್ಷಣ ಕೋಟೆಯನ್ನು ಭೇದಿಸಲು ತೆಲುಗು​ ತಂಡದ ಆಟಗಾರರಿಗೆ ಸಾಧ್ಯವಾಗಲೇ ಇಲ್ಲ. ಬುಲ್ಸ್​ ತಂಡದ ಮಾಜಿ ಆಟಗಾರ ಪವನ್​ ಸೆಹ್ರಾವತ್​ ಅಬ್ಬರದ ರೇಡಿಂಗ್​ ಮೂಲಕ 13 ಅಂಕ ಗಳಿಸಿದರೂ ಕೂಡ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ಅವರ ಆಟ ವ್ಯರ್ಥವಾಯಿತು. ಮೊದಲಾರ್ಧದ ಮುಕ್ತಾಯಕ್ಕೆ ಬುಲ್ಸ್​ 16-12 ಅಂತರದ ಮುನ್ನಡೆ ಸಾಧಿಸಿತು.

ಬುಲ್ಸ್​ ಪರ ಇಂದು ರೇಡರ್​ಗಳಿಂದ ಹೆಚ್ಚಾಗಿ ಡಿಫೆಂಡರ್​ಗಳೇ ಹೆಚ್ಚಿನ ಯಶಸ್ಸು ಸಾಧಿಸಿದರು. ರೇಡರ್​ಗಳಾದ ಸೌರಭ್ ನಂದಲ್​(3), ವಿಶಾಲ್​(3) ಅಂಕಗಳಿಸಿದರು. ರೇಡರ್​ಗಳಾದ ಭರತ್​(6), ವಿಕಾಸ್​ ಖಂಡೋಲಾ(5) ಮತ್ತು ನೀರಜ್​ ನರ್ವಾಲ್​(5) ಅಂಕ ಪಡೆದರು.

ಪ್ರಯೋಗಕ್ಕೆ ಮುಂದಾಗಿ ಕೈ ಸುಟ್ಟುಕೊಂಡ ಬೆಂಗಾಲ್​

ಅತ್ಯಂತ ರೋಚಕವಾಗಿ ಸಾಗಿದ ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡದ ವಿರುದ್ಧ ಕೊನೆಯ 54 ನಿಮಿಷದ ಆಟ ಬಾಕಿ ಇರುವಾಗ ಪ್ರಯೋಗ ನಡೆಸಿದ ಕಾರಣ ಬೆಂಗಾಲ್​ ವಾರಿಯರ್ಸ್ ತಂಡ ಸೋಲಿಗೆ ತುತ್ತಾಯಿತು.

ಹಿಂದಿನ ರೇಡಿಂಗ್​ನಲ್ಲಿ 2 ಅಂಕ ತಂದಿದ್ದ ಸ್ಟಾರ್​ ಆಟಗಾರ ಮಣೀಂದರ್​ ಸಿಂಗ್​ ಅವರನ್ನು ರೇಡಿಂಗ್​ಗೆ ಕಳಿಸದೆ ಸಹ ಆಟಗಾರನನ್ನು ರೇಡಿಂಗ್​ಗೆ ಕಳುಹಿಸಲಾಯಿತು. ಇವರನ್ನು ಟ್ಯಾಕಲ್​ ಮಾಡುವಲ್ಲಿ ಮುಂಬಾ ಯಶಸ್ವಿಯಾಯಿತು. ಕೊನೆಯ ರೇಡ್​ ಮುಂಬಾ ಪಾಲಿಒಗೆ ಸಿಕ್ಕಿತು. ಅದಾಗಲೇ ಸಮಯ ಕೂಡ ಮುಕ್ತಾಯದ ಹಂತಕ್ಕೆ ಬಂದು ನಿಂತಿತ್ತು. 2 ಅಂಕದ ಮುನ್ನಡೆಯಲ್ಲಿದ್ದ ಕಾರಣ ಮುಂಬಾ ಸಮಯ ವ್ಯರ್ಥ ಮಾಡಿ ಪಂದ್ಯವನ್ನು ಗೆದ್ದು ಬೀಗಿತು. ಒಂದೊಮ್ಮೆ ಮಣೀಂದರ್​ ಸಿಂಗ್ ರೇಡಿಂಗ್​ ಮಾಡಿದ್ದರೆ ಪಂದ್ಯದ ಗತಿಯೇ ಬದಲಾಗುವ ಸಾಧ್ಯತೆಯೂ ಇರುತ್ತಿತ್ತು.

Exit mobile version