ಮುಂಬಯಿ: ಪ್ರೊ ಕಬಡ್ಡಿಯ ಭಾನುವಾರದ ರೋಚಕ ಪಂದ್ಯದಲ್ಲಿ ಕೊನೆಗೂ ಗುಜರಾತ್ ಜೈಂಟ್ಸ್ ತಂಡದ ಕೈ ಮೇಲಾಗಿದೆ. ಬೆಂಗಳೂರು ಬುಲ್ಸ್ ವಿರುದ್ಧ 46-44 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. ಬುಲ್ಸ್ ಈ ಸೋಲಿನಿಂದ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶದಿಂದ ವಂಚಿತವಾಯಿತು.
ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡ 15-21 ಅಂತರದಿಂದ ಹಿನ್ನಡೆ ಅನುಭವಿಸಿತು. ಆದರೆ ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಬುಲ್ಸ್ ರೇಡಿಂಗ್ ಮತ್ತು ಡಿಫೆನ್ಸ್ ವಿಭಾಗದಲ್ಲಿ ಸಂಘಟಿತ ಹೊರಾಟ ನಡೆಸಿ ಪಂದ್ಯದ ಕೊನೆಯ ಕ್ಷಣದ ವರೆಗೂ ಮುನ್ನಡೆಯಲ್ಲಿತ್ತು. ಆದರೆ ಪಂದ್ಯದ ಕೊನೆಯ ಒಂದು ನಿಮಿಷದ ಆಟದಲ್ಲಿ ಎಡವಿದ ಬುಲ್ಸ್ ತನ್ನ ಬಳಿ ಇದ್ದ ವಿಜಯಲಕ್ಷ್ಮೀಯನ್ನು ಗುಜರಾತ್ಗೆ ಬಿಟ್ಟುಕೊಟ್ಟಿತು.
ಬೆಂಗಳೂರು ಬುಲ್ಸ್ ಪರ ಭರತ್(14), ವಿಕಾಸ್ ಕಂಡೋಲಾ(9) ಮತ್ತು ನೀರಜ್ ನರ್ವಾಲ್(8) ಉತ್ತಮ ಪ್ರದರ್ಶನ ತೋರಿದರು. ಉಳಿದಂತೆ ಗುಜರಾತ್ ಪರ ಪ್ರತೀಕ್ ದಹಿಯಾ 12 ಬಾರಿ ಎದುರಾಳಿ ಕೊಟೆಗೆ ನುಗ್ಗಿ 16 ಅಂಕ ಕಲೆಹಾಕಿದರು. ಇದರಲ್ಲಿ 12 ಟಚ್ ಪಾಯಿಂಟ್ ಮತ್ತು ಮೂರು ಬೋನಸ್ ಹಾಗೇ ಒಂದು ಟ್ಯಾಕಲ್ ಅಂಕ ಒಳಗೊಂಡಿದೆ. ತಂಡದ ಮತೊಬ್ಬ ಆಟಗಾರ ರಾಕೇಶ್ ರೇಡಿಂಗ್ನಲ್ಲಿ 10 ಅಂಕ ಗಳಿಸಿ ಉತ್ತಮ ಸಾಥ್ ನೀಡಿದರು. ಒಟ್ಟಾರೆ ಗುಜರಾತ್ ಜೈಂಟ್ಸ್ ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ | Pro Kabaddi | ಯು ಮುಂಬಾ ಆರ್ಭಟಕ್ಕೆ ಮಂಕಾದ ತೆಲುಗು ಟೈಟಾನ್ಸ್